ಬೆಳಗಾವಿ : ಐಪಿಎಲ್ ನಲ್ಲಿ ನಿನ್ನನ್ನು ನೇಮಕ ಮಾಡುವದಾಗಿ ಯುವ ಕ್ರಿಕೆಟ್ ಆಟಗಾರನಿಗೆ 24 ಲಕ್ಷ ಪಂಗನಾಮ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಬಡ ಸೆಕ್ಯೂರಿಟಿ ಗಾರ್ಡ್ ಕುಟುಂಬದಿಂದ ಲಕ್ಷ ಲಕ್ಷ ಪೀಕಿದ ಹಾರಾಮಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದ ಯುವಕ ರಾಕೇಶ ಯಡೂರೆ ವಂಚನೆಗೆ ಒಳಗಾದ ಯುವಕನಾಗಿದ್ದಾನೆ. ಯುವ ಆಟಗಾರ ರಾಕೇಶ್ ಈತ ಐಪಿಎಲ್ ಗೆ ರಾಜಸ್ಥಾನ ರಾಯಲ್ಸ್ ತಂಡ ಸೇರಲು 24 ಲಕ್ಷ ರೂಪಾಯಿ ಹಣ ನೀಡಿ ಕಂಗಾಲಾಗಿ ಕೈ ಸುಟ್ಟುಕೊಂಡಿದ್ದಾನೆ.
ಬಡ ಕುಟುಂಬದಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡ್ತಿರುವ ರಾಕೇಶ ತಂದೆ ಭೀಮಪ್ಪ ಮಗನ ಭವಿಷ್ಯ ಉಜ್ವಲ ಆಗುತ್ತೆಂದು ಸಾಲಸೂಲ ಮಾಡಿ ಹಣ ನೀಡಿದ್ದಾರೆ. ಇದರಿಂದ ಬಡ ಕುಟುಂಬ ಒಂದು ಬೀದಿಗೆ ಬಿಂದಂತಾಗಿದೆ.
ನಿನ್ನನ್ನು ರಾಜಸ್ಥಾನ ರಾಯಲ್ ಕ್ರಿಕೆಟ್ ತಂಡಕ್ಕೆ ನೇಮಕ ಮಾಡುವದಾಗಿ ನಂಬಿಸಿದ ಕಿಲಾಡಿಗಳು ರಾಕೇಶ್ ಗೆ ಸೈಬರ್ ವಂಚನೆ ಮಾದರಿಯಲ್ಲೇ ವಂಚನೆ ಮಾಡಿದ್ದಾರೆ. ಯುವ ಕ್ರಿಕೆಟಿಗ ರಾಕೇಶ್ ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರ್‌ಬಿಸಿಎಲ್ (ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್) ಟೂರ್ನಿಯ ಆಯ್ಕೆಯ ಟ್ರೈಯಲ್‌ನಲ್ಲಿ 2024 ಮೇ ತಿಂಗಳಲ್ಲಿ ಹೈದ್ರಾಬಾದ್‌ನಲ್ಲಿ ಟ್ರೈಯಲ್ ನೀಡಿದ್ದ ರಾಕೇಶ ಆಲ್‌ರೌಂಡರ್ ಆಟದ ಮೂಲಕ ಆಯೋಜಕರ ಗಮನ ಸಳೆದಿದ್ದನು.
ರಾಕೇಶ ಆಟ ನೋಡಿ ಅನಾಮಧೇಯ ಇನ್ಸ್ಟಾ ಖಾತೆಯಿಂದ ರಾಕೇಶಗೆ ಸಂದೇಶ ಕಳುಹಿಸಿದ್ದ ಕಿಡಿಗೇಡಿಗಳು ನಿಮ್ಮ ಕ್ರಿಕೆಟ್ ಪ್ರದರ್ಶನ ಚನ್ನಾಗಿದೆ, ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಿನ್ನ ನೇಮಕ ಮಾಡಿಸ್ತಿವಿ ಎಂದು ನಂಬಿಸಿ ವಂಚಕರು ವಂಚನೆ ಮಾಡಿದ್ದಾರೆ.
2024 ನವೆಂಬರ್‌ನಿಂದ 2025 ಎಪ್ರಿಲ್ 2025ರವರೆಗೆ ಹಂತ ಹಂತವಾಗಿ 24 ಲಕ್ಷ ವಂಚಕರು ಹಣ ಸುಲಿಗೆ ಮಾಡಿದ್ದಾರೆ. ಕಿಡಿಗೇಡಿಗಳ ಮಾತು ನಂಬಿ ರಾಕೇಶ ಕುಟುಂಬಸ್ಥರು ಬ್ಯಾಂಕ್ ಅಕೌಂಟ್, ಗೂಗಲ್ ಪೇ, ಫೋನ್ ಪೇ ಮೂಲಕ 24 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.
ಆನ್‌ಲೈನ್ ಮೂಲಕ ಈ ರೀತಿ ಯಾರಾದರೂ ಆಫರ್ ನೀಡಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅನಾಮಧೇಯ ವ್ಯಕ್ತಿಗಳ ಮಾತಿಗೆ ಮರಳಾಗಿ ಹಣ ಕಳೆದುಕೊಳ್ಳದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಸೂಚನೆ ನೀಡಿದ್ದಾರೆ.