ಕಾರ್ಮಿಕರ ಶ್ರಮವನ್ನು ಗೌರವಿಸಬೇಕು: ನ್ಯಾ. ರಂಗನಾಥಸ್ವಾಮಿ ಜೆ.

Laborers' hard work should be respected: Justice Ranganathaswamy J.

ಕೊಪ್ಪಳ  08:  ಕಾರ್ಮಿಕರು ದೇಶದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡುತ್ತಾರೆ. ಅವರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಯಲಬುರ್ಗಾ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರಂಗನಾಥಸ್ವಾಮಿ ಜೆ. ಹೇಳಿದರು. 

ಅವರು ಮಂಗಳವಾರ ತಳಕಲ್‌ನ ಅಬ್ದುಲ್ ನಜೀರಸಾಬ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂತರಾಷ್ಟ್ರೀಯ ಕಾರ್ಮಿಕ ದಿನವು ಕಾರ್ಮಿಕ ಹೋರಾಟದ ನೆನಪಿಗಾಗಿ ಆಚರಿಸುತ್ತೇವೆ. ಕಾರ್ಮಿಕರ ಮೇಲೆ ಇದ್ದ ದೌರ್ಜನ್ಯ ಮತ್ತು ಹೆಚ್ಚು ಕೆಲಸದ ಸಮಯ ಹಾಗೂ ಕಿರುಕುಳ ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು  ಕಮ್ಯೂನಿಸ್ಟ್‌ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಕ್ರಾಂತಿ ಸ್ವರೂಪದ ಹೋರಾಟ ನಡೆಸಿದರು. ಆಗ ಅದೊಂದು ಕ್ರಾಂತಿಯೇ ಆಯಿತು. ನಂತರದಲ್ಲಿ ಆ ಹೋರಾಟದ ನೆನಪಿಗಾಗಿ ಮೇ 1 ಅಂತರಾಷ್ಟ್ರೀಯ ಕಾರ್ಮಿಕ ದಿನವಾಗಿ 1886 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಭಾರತದಲ್ಲಿ 1923ರ ಮೇ 1 ರಿಂದ ಕಾರ್ಮಿಕ ದಿನಾಚರಣೆ ಆಚರಿಸುತ್ತಾ ಬರುತ್ತಿದ್ದೇವೆ. ನಮ್ಮ ದೇಶದಲ್ಲಿ ಕಾರ್ಮಿಕರ ರಕ್ಷಣೆಗೆ ಅನೇಕ ಕಾನೂನುಗಳನ್ನು ರಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಿಂದಲೂ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಂಡು ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.ಬಾಲಕಾರ್ಮಿಕ ಕಾಯ್ದೆ ಕುರಿತು ಮಾಹಿತಿ ನೀಡಿ, ಮಕ್ಕಳನ್ನು ಯಾರೂ ಕೂಡಾ ಕೆಲಸಕ್ಕೆ ಬಳಸಿಕೊಳ್ಳಬಾರದು, ಅವರನ್ನು ಶಿಕ್ಷಣವಂತರನ್ನಾಗಿ ಮಾಡಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಹೇಳಿದರು.  

ಅಪರ ಸರಕಾರಿ ವಕೀಲರಾದ ಮಲ್ಲನಗೌಡ ಎಸ್‌. ಪಾಟೀಲ ಅವರು ಮಾತನಾಡಿ, ದೇಶದ ಬಹುತೇಕ ಜನಸಂಖ್ಯೆ ಕಾರ್ಮಿಕರಿದ್ದಾರೆ. ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕರಿಗೆ ಉಪಯುಕ್ತ ಯೋಜನೆಗಳನ್ನು ರೂಪಿಸಿ ಸಹಾಯಧನ ನೀಡುತ್ತಿದೆ. ಈ ಯೋಜನೆಗಳ ಉಪಯೋಗ ಪಡೆದುಕೊಳ್ಳಿ ಹಾಗೂ ಕನಿಷ್ಠ ವೇತನ ತಮಗೆ ಮಾಲೀಕರು ನೀಡದಿದ್ದರೆ ತಾವುಗಳು ಕಾರ್ಮಿಕ ಇಲಾಖೆಗೆ ಸಂಪರ್ಕಿಸಿ ನ್ಯಾಯಯುತ ವೇತನ ಪಡೆಯುವ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.   

ಕುಷ್ಟಗಿ ಕಾರ್ಮಿಕ ನೀರೀಕ್ಷಕರಾದ ನಿವೇದಿತಾ ಅವರು ಕಾರ್ಮಿಕ ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿರುವ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸಿದರು.  

ಅಧ್ಯಕ್ಷತೆ ವಹಿಸಿದ ಎಸ್‌.ಎಸ್ ಹೊಂಬಳ ಅವರು ಮಾತನಾಡಿ, ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಸಂಘಟನೆಯವರು ಸಂಪೂರ್ಣ ಮಾಹಿತಿ ಪಡೆದು ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ತಳಕಲ್ ಗ್ರಾ.ಪಂ ಅಧ್ಯಕ್ಷರಾದ ಜಹೀರಾ ಬೇಗಂ, ಕಲ್ಯಾಣ ಕರ್ನಾಟಕ ಒಕ್ಕೂಟ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ರಮೇಶ ಘೋರೆ​‍್ಡ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ,   ಕ.ಕಾ ಮಂಡಳಿಯ ಎಕ್ಸಿಕ್ಯೂಟಿವ್ ಹೇಮಂತ್ ಸಿಂಗ್, ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದಶಿ ಮಹಾಂತೇಶ ಈ.ಟಿ. ಸೇರಿದಂತೆ ಉಡಚಮ್ಮದೇವಿ ಕಟ್ಟಡ ಕಾರ್ಮಿಕ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಹಾಗೂ ತಳಕಲ್ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.