ಕುಮಾರಸ್ವಾಮಿ ನಡತೆಯಿಂದ ಸ್ವಪಕ್ಷದವರೇ ಪಕ್ಷ ತ್ಯಜಿಸಲು ನಿರ್ಧರಿಸಿದ್ದಾರೆ: ಶೆಟ್ಟಿ

ಲೋಕದರ್ಶನ ವರದಿ

ಕುಮಟಾ : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಡತೆ ಹಾಗೂ ಹಲವು ಹೇಳಿಕೆಗಳನ್ನು ನೋಡಿ ಸ್ವಪಕ್ಷದವರೇ ಪಕ್ಷವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಚುನಾವಣೆಯ ಪೂರ್ವದಲ್ಲಿ ನೀಡಿರುವಂತಹ ಹಲವು ಭರವಸೆಗಳು ಸುಳ್ಳು ಎಂಬುದು ಇಂದು ಜನತೆಗೆ ತಿಳಿದಿದೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಬಿಜೆಪಿಯು ಆಯೋಜಿಸುತ್ತಿರುವ ಅಭಿಯಾನದಂತಹ ಹಲವು ಕಾರ್ಯಕ್ರಮಗಳನ್ನು ನಕಲಿ ಮಾಡಲು ಹೊರಟಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚ  ರಾಜ್ಯಾಧ್ಯಕ್ಷೆ ಹಾಗೂ ಸಂಘಟನಾ ಪರ್ವ ಸದಸ್ಯತಾ ಅಭಿಯಾನದ ಉಸ್ತುವಾರಿ ಭಾರತಿ ಶೆಟ್ಟಿ ಆರೋಪಿಸಿದರು.

ಅವರು ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ  ಉತ್ತರಕನ್ನಡ ಇವರು ಆಯೋಜಿಸಿದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ 2019ರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕರ್ತರ ಶ್ರಮ, ರಾಜ್ಯ ಸಮ್ಮಿಶ್ರ ಸರ್ಕಾರದ ವೈಫಲ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿಂದ ಬಿಜೆಪಿ ಹೆಚ್ಚಿನ ಬಹುಮತದಿಂದ ಮತ್ತೆ ಗದ್ದುಗೆಗೇರಿದೆ ಎಂದು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚ  ರಾಜ್ಯಾಧ್ಯಕ್ಷೆ ಹಾಗೂ ಸಂಘಟನಾ ಪರ್ವ ಸದಸ್ಯತಾ ಅಭಿಯಾನದ ಉಸ್ತುವಾರಿ ಭಾರತೀ ಶೆಟ್ಟಿ ಅಭಿಪ್ರಾಯಪಟ್ಟರು. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರನ್ನು ಹೊರತುಪಡಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ನವರೂ ಕೂಡಾ ಬಿಜೆಪಿಗೆ ಮತ ಹಾಕಿ ಬಿಜೆಪಿ ಗೆಲುವು ಸಾಧಿಸಲು ಸಹಕಾರಿಯಾಗಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರ ಸತತ ಪರಿಶ್ರಮ ಹಾಗೂ ಸಂಘಟನಾ ಚಾತುರ್ಯತೆ ಮೆಚ್ಚುವಂತದ್ದು. ದೇಶದ ಜನತೆ ಮೋದಿಯವರ ಸಮರ್ಥ ನಾಯಕತ್ವವನ್ನು ಮೆಚ್ಚಿದ್ದಾರೆ. ಆದರೆ ರಾಜ್ಯದ ಈಗಿನ ನಾಲಾಯಕ್ ಸರ್ಕಾರ ರಾಜ್ಯಕ್ಕೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ರಾಜ್ಯ ಸರ್ಕಾ ರದ ವಿರುದ್ಧ ಹರಿಹಾಯ್ದರು.

ರಾಜ್ಯ ಕಾರ್ಯದರ್ಶಿ  ವಿಕ್ರಮಾದಿತ್ಯ ತಿಂಗಳೆ ಹಾಗೂ ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಉತ್ತರಕನ್ನಡ ಜಿಲ್ಲೆ ಹೆಚ್ಚಿನ ಶಕ್ತಿ ಹೊಂದಿದೆ. ಕರಾವಳಿ ಭಾಗದಲ್ಲಿ 3 ಲಕ್ಷ ಸದಸ್ಯತ್ವ ನೋಂದಾಯಿಸಲು ನಮಗೆ ಸೂಚಿಸಿದ್ದಾರೆ. ಎಲ್ಲ ಕಾರ್ಯಕರ್ತರು ಸೇರಿದಂತೆ ಮಹಿಳಾ ಕಾರ್ಯಕರ್ತರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನಾ ಪರ್ವದ ಸದಸ್ಯತ್ವ ಹೊಂದಬೇಕು. ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಮುಂಬರುವ ಚುನಾವಣೆಗಳನ್ನು ಎದುರಿಸಲು ಸಹಕಾರಿಯಾಗಲಿದೆ ಎಂದರು. 

ಶಾಸಕರಾದ ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಮಾತನಾಡಿ, ನಮ್ಮ ಭಾಗಕ್ಕೆ ನೀಡಿರುವ ಮೂರು ಲಕ್ಷ ಸದಸ್ಯತ್ವದಲ್ಲಿ ಈಗಾಗಲೇ 1.43 ಲಕ್ಷ ಸದಸ್ಯತ್ವ ನೋಂದಾವಣಿಯಾಗಿದೆ. ಇನ್ನುಳಿದ ಸದಸ್ಯತ್ವದ ನೋಂದಾವಣಿಯನ್ನು ಸಂಪೂರ್ಣವಾಗಿ ಪೂರೈಸಲಿದ್ದೇವೆ. ಇನ್ನು ಪಕ್ಷದ ಕಾರ್ಯಕರ್ತರು ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಶ್ರಮಿಸಿದಂತೆ ಗ್ರಾ.ಪಂ, ತಾ.ಪಂ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗೂ ಶ್ರಮಿಸಿ, ಹೆಚ್ಚಿನ ಬಹುಮತದಿಂದ ಗೆಲವು ಸಾಧಿಸಬೇಕಾಗಿದೆ. ಅಭಿಯಾನ ಸಂಘಟನೆಗೆ ಅತ್ಯಂತ ಸಹಕಾರಿಯಾಗಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ನಾಯಕ, ಸುಬ್ರಾಯ ನಾಯ್ಕ ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಮತ್ತು ಕರಾವಳಿ ಭಾಗದ ಎಲ್ಲ ಮಹಿಳಾ ಹಾಗೂ ಪುರುಷ ಕಾರ್ಯಕರ್ತರು, ಪಕ್ಷದ ಪ್ರಮುಖರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.