ನೀರಿಲ್ಲದೆ ಬತ್ತಿದ ಕಡ್ಲೆವಾಡ ಪಿಸಿಎಚ್ ಕೆರೆ: ಜಾನುವಾರಗಳೊಂದಿಗೆ ಕೆರೆಯಲ್ಲಿ ರೈತರ ವಿನೂತನ ಪ್ರತಿಭಟನೆ

ನೀರಿಲ್ಲದೆ ಬತ್ತಿದ ಕಡ್ಲೆವಾಡ ಪಿಸಿಎಚ್ ಕೆರೆ: ಜಾನುವಾರಗಳೊಂದಿಗೆ ಕೆರೆಯಲ್ಲಿ ರೈತರ ವಿನೂತನ ಪ್ರತಿಭಟನೆ Kadlevada PCH Lake Dried Up Due to Lack of Water: Farmers Stage Unique Protest with Livestock Inside

 ದೇವರಹಿಪ್ಪರಗಿ 15: ಮುಂಗಾರು ಮಳೆ ವಿಳಂಬದಿಂದ ಜನ ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕೂಡಲೇ ನೀರು ಹರಿಸಿ, ಕಡ್ಲೆವಾಡ ಪಿಸಿಎಚ್ ಕೆರೆ ತುಂಬಿಸುವುದರ ಮೂಲಕ ರೈತ ಸಮುದಾಯದ ನೆರವಿಗೆ  ಸರ್ಕಾರ ಹಾಗೂ ಜಿಲ್ಲಾಡಳಿತ ಧಾವಿಸುವಂತೆ ಆಗ್ರಹಿಸಿ ಮುಳಸಾವಳಗಿ, ಇಂಗಳಗಿ, ನಿವಾಳಖೇಡ,ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕೆರೆಯಲ್ಲಿ ಜಾನುವಾರಗಳೊಂದಿಗೆ ಧರಣಿ ಕುಳಿತು ವಿನೂತನ ಪ್ರತಿಭಟನೆ ಕೈಗೊಂಡರು.  

ತಾಲೂಕಿನ ಇಂಗಳಗಿ, ನಿವಾಳಖೇಡ, ಮುಳಸಾವಳಗಿ ಕಡ್ಲೇವಾಡ ಪಿಸಿಎಚ್, ಚಿಕ್ಕರೂಗಿ, ಗ್ರಾಮಗಳು ರೈತರು ಬುಧವಾರ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ತೆರಳಿ ಸುಡು ಬಿಸಿಲಿನಲ್ಲಿ ಜಾನುವಾರಗಳೊಂದಿಗೆ ಧರಣಿ ಕುಳಿತ ವಿನೂತನ ಪ್ರತಿಭಟನೆಗೆ ಮುಂದಾದರು.  

ಜಿಲ್ಲಾ ರೈತಸಂಘದ ಉಪಾಧ್ಯಕ್ಷರಾದ ಸಾಹೇಬಗೌಡ ರೆಡ್ಡಿ ಮಾತನಾಡಿ, ಚಿಮ್ಮಲಗಿ ಕಾಲುವೆಗೆ ಬೇಸಿಗೆ ಸಮಯದಲ್ಲಿ ನೀರು ಹರಿಸಲಾಗಿದ್ದು, ಕೆರೆಗಳಲ್ಲಿ ಶೇ.60 ರಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವಿಕವಾಗಿ ಕೆರೆಗಳಿಗೆ ಬಂದು ನೋಡಿದರೆ ಶೇ.5 ರಷ್ಟು ನೀರಿಲ್ಲ. ಕಳೆದ ಎರಡು ತಿಂಗಳುಗಳಿಂದ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕಾಲುವೆಯ ಮೂಲಕ ಕೆರೆ ತುಂಬುತ್ತಿಲ್ಲ. ಇದರಿಂದ ಈ ಕೆರೆಯ ನೀರಿನ ಮೇಲೆ ಅವಲಂಬಿತವಾದ ಕೃಷಿಕರು, ಜಾನುವಾರಗಳ ರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.  

ಜಿಲ್ಲೆಯ ಇತರ ತಾಲೂಕುಗಳ ಕಾಲುವೆಗಳಲ್ಲಿ ನಿರಂತರ ನೀರು ಹರಿಸಲಾಗಿದೆ ಆದರೆ ಚಿಮ್ಮಲಗಿ ಕಾಲುವೆಯನ್ನು ಸಂಪೂರ್ಣ ಮರೆಯಲಾಗಿದೆ. ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ, ಮುಂಗಾರು ವಿಳಂಬದಿಂದ ರೈತರು ಹೈರಾಣ ಆಗಿದ್ದಾರೆ. ಆದಷ್ಟು ಬೇಗ ಕಾಲುವೆ ಮೂಲಕ ಉಪ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಸಿ ನಮ್ಮ ಕೆರೆಗೆ ನೀರು ತುಂಬಿಸಲು  ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಇಲ್ಲದೆ ಇದ್ದರೆ. ವಿಜಯಪುರ ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ದೇವರಹಿಪ್ಪರಗಿಯ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

ಧರಣಿಯಲ್ಲಿ ಶ್ರೀಶೈಲ ಕಬಾಡಗಿ, ಪಿಟ್ಟಪ್ಪ ಗಣಜಲಿ,ರಾಚಗೊಂಡ ಕಬಾಡಗಿ,ಲಿಂಗರಾಜ ಸಂಗೋಗಿ, ಶಂಕರಗೌಡ ಹಿರೇಗೌಡ,ತಿಪ್ಪಣ್ಣ ತಳವಾರ, ನಾಗರಾಜ ಕಬಾಡಗಿ, ಹಣಮಂತ ಸಂಗೋಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು, ಮಹಿಳೆಯರು ಇದ್ದರು.