ಸಮಾಜಕ್ಕೆ ಜಂಗಮ ಸಮಾಜದ ಕೊಡುಗೆ ಅಪಾರ: ರಾಮಲಿಂಗಯ್ಯಶ್ರೀ

ರೇಣುಕಾಚಾರ್ಯರ ಜಯಂತೋತ್ಸವ: ಭಾವಚಿತ್ರದ ಭವ್ಯ ಮೆರವಣಿಗೆ  

ತಾಳಿಕೋಟಿ 24: ಸಮಾಜದಲ್ಲಿ ಜನರನ್ನು ಧಾರ್ಮಿಕ ತತ್ವಗಳ ಆಧಾರದಲ್ಲಿ ಸಂಸ್ಕರಿಸಿ ಅವರಿಗೆ ಸನ್ಮಾರ್ಗದರ್ಶನವನ್ನು ಮಾಡುವ ಸ್ಥಾನದಲ್ಲಿರುವ ಜಂಗಮ ಸಮಾಜ ಕೇವಲ ಬೇಡುವ ಸಮಾಜವಾಗದೆ ಸಮಾಜಕ್ಕೆ ಕೊಡುವಂತಹ ಸಮಾಜವಾಗಿದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಹಾಗೂ ಚಬನೂರು ಹಿರೇಮಠದ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.  

ಶನಿವಾರ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವದ ಅಂಗವಾಗಿ ತಾಲೂಕ ಬೇಡ ಜಂಗಮ ಸಮಾಜದ ವತಿಯಿಂದ ಹಮ್ಮಿಕೊಂಡ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  

ಜಗದ್ಗುರು ರೇಣುಕಾಚಾರ್ಯರು ಕೇವಲ ಒಂದು ಜಾತಿಗಾಗಿ ಬಂದವರಲ್ಲ ಅವರು ಇಡೀ ಮನುಕುಲದ ಏಳಿಗೆಯನ್ನು ಬಯಸಿದವರು ಇಂಥ ಮಹಾನ್ ಗುರುಗಳ ಅನುಯಾಯಿಗಳಾದ ಜಂಗಮ ಸಮಾಜ ಬಾಂಧವರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಉತ್ತಮ ಸಂಸ್ಕಾರಗಳನ್ನು ನೀಡಿ ಎಂದು ಸಲಹೆ ನೀಡಿದವರು ಇಂದಿನ ಕಾರ್ಯಕ್ರಮದಲ್ಲಿ ನಮ್ಮ ತಾಯಂದಿರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತೋಷದ ಸಂಗತಿಯಾಗಿದೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.   

ಪಡೇಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಜಂಗಮ ಸಮಾಜದವರು ಆಚಾರವಂತರು ನೀತಿವಂತರು ಆಗಬೇಕು ಜಗದ್ಗುರು ರೇಣುಕಾಚಾರ್ಯ ನುಡಿದಂತೆ ಜಾತಿಯತೆಯನ್ನು ಬಿಟ್ಟು ಸರ್ವ ಸಮಾಜದವರನ್ನು ಒಗ್ಗೂಡಿಸಿಕೊಂಡು ಹೋಗಬೇಕು ಇಂಥ ಶಕ್ತಿಯನ್ನು ಜಗದ್ಗುರುಗಳಾದ ರೇಣುಕಾಚಾರ್ಯರು ನಮಗೆ ನೀಡಿದ್ದಾರೆ ಎಂದರು.  

ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ಲಿಂಗೋದ್ಬವರಾಗಿದ್ದಾರೆ. ಅವರ ತತ್ವಾದರ್ಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.  

ನಾವದಗಿ ಗ್ರಾಮದ ರಾಜಗುರು ಪರ್ವತೇಶ್ವರ ಬ್ರಹನ್ಮಠದ ರಾಜೇಂದ್ರ ಒಡೆಯರ್ ಶಿವಾಚಾರ್ಯರು ಮಾತನಾಡಿ ದುಪಟ್ಟಣದಲ್ಲಿ ನಡೆದ ಜಯಂತೋತ್ಸವ ಕಾರ್ಯಕ್ರಮ ಒಂದು ಐತಿಹಾಸಿಕವಾದ ಕಾರ್ಯಕ್ರಮವಾಗಿದೆ. ಚುನಾವಣೆ ನೀತಿ ಸಂಹಿತೆ ಮಧ್ಯೇಯು ಈ ರೀತಿಯಾಗಿ ಅಭೂತಪೂರ್ವಾದ ಸಮಾರಂಭ ಜರುಗಿದೆ ಇದು ಸಂತೋಷದ ವಿಷಯ ಜಂಗಮ ಸಮಾಜದ ಬಾಂಧವರು ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಕೆಲಸವನ್ನು ಮಾಡಲು ಪ್ರಯತ್ನಿಸಬೇಕು ಕಾರ್ಯಕ್ರಮ ಜಾತಿಗೆ ಮಾತ್ರ ಸೀಮಿತವಾಗದಿರಲಿ ಎಂದರು.  

ವೇದಿಕೆ ಕಾರ್ಯಕ್ರಮದ ಮೊದಲು ಖಾಸ್ಗತೇಶ್ವರ ಮಠದಿಂದ ಆರಂಭಗೊಂಡ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಸುಮಂಗಲೆಯರ ಕುಂಭಮೇಳ ವಾದ್ಯ ದೊಂದಿಗೆ ಪಟ್ಟಣದಲ್ಲಿ ಸಂಚರಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಗೆ ತಲುಪಿತು. ಸಮಾರಂಭವನ್ನು ಉಪಸ್ಥಿತ ಎಲ್ಲ ಶ್ರೀಗಳು ಅತಿಥಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.  

 ಸಮಾಜದ ಪ್ರತಿಭಾವಂಥ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸಾಸನೂರ- ತುಂಬಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ನೇತೃತ್ವವನ್ನು ದೇವರ ಹಿಪ್ಪರಗಿಯ ಜಡಿಸಿದ್ದೇಶ್ವರ ಶ್ರೀಗಳು ಕಲಕೇರಿ ಮುರಗೇಶ ವಿರಕ್ತಮಠ, ಪರದೇಶಿ ಮಠದ ಶ್ರೀಗಳು, ಎಸ್‌.ಆರ್‌. ನವಲಿಮಠ ಇಲ್ಕಲ್ ವಹಿಸಿದ್ದರು. ದಾನಯ್ಯ ಹಿರೇಮಠ, ಐಬಿ ನಾಗಯ್ಯ ಸ್ವಾಮಿ, ದೇಸಾಯಿ ಗುರು, ಎಸ್‌.ಎನ್‌. ಹಿರೇಮಠ, ಬ್ಯಾಕೋಡ ಜಂಗಮ ಸಮಾಜದ ಅಧ್ಯಕ್ಷ ಶರಣಯ್ಯ ಹಿರೇಮಠ, ಶಿವಶಂಕರ್ ಹಿರೇಮಠ, ಗಜದಂಡಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಕಾಶಿಬಾಯಿ ಅಮ್ಮನವರು, ಭಂಟನೂರು ಕಾಳಿಕಾ ಮಠದ ಅಮ್ಮನವರು ಹಾಗೂ ಸಮಾಜದ ಗಣ್ಯರು ಇದ್ದರು.  

ಶಿಕ್ಷಕ ದಮ್ಮೂರುಮಠ ನಿರೂಪಿಸಿದರು. ಸೋಮಶೇಖರ್ ಹಿರೇಮಠ ಮಿಣಜಗಿ ಸ್ವಾಗತಿಸಿದರು. ರಾಜಶೇಖರ್ ಹಿರೇಮಠ ವಂದಿಸಿದರು.