ಜಾಕ್ವೆಲ್ ಕುಸಿದು 500 ರೈತರಿಗೆ ಸಂಕಷ್ಟ

ಜಾಕ್ವೆಲ್ ಕುಸಿದು 500 ರೈತರಿಗೆ ಸಂಕಷ್ಟ Jackwell collapse spells trouble for 500 farmers

ಲೋಕದರ್ಶನ ವರದಿ 

ಕಾಗವಾಡ ಜು. 7: ಅಮೃತ್‌-2  ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೇಳೆ ಜಾಕ್ವೆಲ್ ಕುಸಿದ ಪರಿಣಾಮ ಸುಮಾರು 4 ಕೋಟಿ ಮೌಲ್ಯದ ನಷ್ಟ ಸಂಭವಿಸಿದ್ದು, ಸುಮಾರು 500 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.  

ಜುಲೈ 6ರಂದು ಕೃಷ್ಣಾ ನದಿ ತೀರದಲ್ಲಿ ಅಮೃತ್‌-2 ಯೋಜನೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಅಗೆತ ಮತ್ತು ಬ್ಲಾಸ್ಟಿಂಗ್ ನಡೆಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ಕುರಿತು ಈ ಹಿಂದೆಯೇ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ರೈತರು ದೂರಿದ್ದಾರೆ.  

ಜಾಕ್ವೆಲ್ ಸಂಪೂರ್ಣವಾಗಿ ಕುಸಿದ ಪರಿಣಾಮ 75 ಅಶ್ವಶಕ್ತಿಯ ನಾಲ್ಕು ಪಂಪ್ಸೆಟ್ಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  

ಘಟನೆ ಬಳಿಕ ಕಾಮಗಾರಿ ನಡೆಸುತ್ತಿದ್ದ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಂತಿನಾಥ ನೀರಾವರಿ ಯೋಜನೆಯ ಅಧ್ಯಕ್ಷ ಅಣ್ಣಾ ಅರಬಾಡೆ, ಕೃಷ್ಣಾ ರೈತ ಸೇವಾ ಸಂಘದ ಅಧ್ಯಕ್ಷ ರಾಜು ನಾಂದ್ರೆ, ನಿರ್ದೇಶಕ ಕುಮಾರ ಪಾಟೀಲ, ಕುಂತಿನಾಥ ಮಾಲಗಾವೆ, ಭರತ್ ಪಾಟೀಲ, ರಾಜು ಯಂಡಗೌಡರ, ಅರುಣ್ ಯಂಡಗೌಡರ, ಶೀತಲ್ ಮುಗಳೋಳಿ, ಪೋಪಟ್ ನಾಂದ್ರೆ, ಬಸಪ್ಪ ಬಾವೂಳಿ, ಬಾಳು ಚಮಕೇರಿ ಸೇರಿದಂತೆ ರೈತರು ಹಾನಿ ಪರೀಶೀಲಿಸಿದರು.  

ರಾಜ್ಯ ಸರ್ಕಾರ, ನೀರಾವರಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಮೌಲ್ಯಮಾಪನ ನಡೆಸಬೇಕು. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.