ಭಾರತ ಅಂಚೆ ಇಲಾಖೆಯ ಅಧಿಕೃತ ಮ್ಯಾಸ್ಕಾಟ್ ವಿನ್ಯಾಸಕ್ಕಾಗಿ ದೇಶವ್ಯಾಪಿ ಸ್ಪರ್ಧೆ: ವಿಜೇತರಿಗೆ 75 ಸಾವಿರ ರೂ.ವರೆಗೆ ನಗದು ಬಹುಮಾನ

ಭಾರತ ಅಂಚೆ ಇಲಾಖೆಯ ಅಧಿಕೃತ ಮ್ಯಾಸ್ಕಾಟ್ ವಿನ್ಯಾಸಕ್ಕಾಗಿ ದೇಶವ್ಯಾಪಿ ಸ್ಪರ್ಧೆ: ವಿಜೇತರಿಗೆ 75 ಸಾವಿರ ರೂ.ವರೆಗೆ ನಗದು ಬಹುಮಾನ India Post Invites Entries for Nationwide Mascot Design Contest, Announces Cash Prizes

ನವದೆಹಲಿ, ಜುಲೈ 18 : ಭಾರತ ಅಂಚೆ ಇಲಾಖೆಯು ತನ್ನ ಮೊದಲ ಅಧಿಕೃತ ಮ್ಯಾಸ್ಕಾಟ್‌ ವಿನ್ಯಾಸಕ್ಕಾಗಿ ದೇಶವ್ಯಾಪಿ ಸ್ಪರ್ಧೆಯನ್ನು ಆರಂಭಿಸಿದ್ದು, ವಿಜೇತ ವಿನ್ಯಾಸಗಳಿಗೆ ಗರಿಷ್ಠ 75 ಸಾವಿರ ರೂ.ವರೆಗೆ ನಗದು ಬಹುಮಾನ ನೀಡಲಾಗುವುದು ಎಂದು ಸಂವಹನ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಗವ್ (MyGov) ವೇದಿಕೆಯಲ್ಲಿ ಆಯೋಜಿಸಲಾಗಿರುವ ಭಾರತ ಅಂಚೆ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ ಜುಲೈ 15ರಂದು ಆರಂಭವಾಗಿದ್ದು, ಆಗಸ್ಟ್ 15ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಂಚೆ ಇಲಾಖೆಯ ಮೌಲ್ಯಗಳಾದ ನಂಬಿಕೆ, ವಿಶ್ವಾಸಾರ್ಹತೆ, ಒಳಗೊಳ್ಳುವಿಕೆ, ಸಾರ್ವಜನಿಕ ಸೇವೆ ಮತ್ತು ಡಿಜಿಟಲ್ ನವೀನತೆಯನ್ನು ಪ್ರತಿಬಿಂಬಿಸುವ ಮ್ಯಾಸ್ಕಾಟ್‌ ಸೃಷ್ಟಿಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.

ಈ ಸ್ಪರ್ಧೆಯಲ್ಲಿ ಎಲ್ಲಾ ಭಾರತೀಯ ನಾಗರಿಕರು ಭಾಗವಹಿಸಬಹುದು. ಸ್ಪರ್ಧಿಗಳು ತಮ್ಮ ಮೂಲ ಮ್ಯಾಸ್ಕಾಟ್ ವಿನ್ಯಾಸದ ಜೊತೆಗೆ ಅದಕ್ಕೆ ಸೂಕ್ತವಾದ ಹೆಸರನ್ನು ಹಾಗೂ ವಿನ್ಯಾಸದ ಪರಿಕಲ್ಪನೆಯನ್ನು ವಿವರಿಸುವ ಸಂಕ್ಷಿಪ್ತ ಟಿಪ್ಪಣಿಯನ್ನು ಸಲ್ಲಿಸಬೇಕು.

ಮ್ಯಾಸ್ಕಾಟ್ ವಿನ್ಯಾಸ ಮತ್ತು ಮ್ಯಾಸ್ಕಾಟ್ ಹೆಸರಿಗಾಗಿ ಪ್ರತ್ಯೇಕ ಬಹುಮಾನ ವಿಭಾಗಗಳನ್ನು ಘೋಷಿಸಲಾಗಿದೆ. ಉತ್ತಮ ಮೂರು ಮ್ಯಾಸ್ಕಾಟ್ ವಿನ್ಯಾಸಗಳಿಗೆ ಕ್ರಮವಾಗಿ 75 ಸಾವಿರ ರೂ., 50 ಸಾವಿರ ರೂ. ಮತ್ತು 25 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಉತ್ತಮ ಮೂರು ಮ್ಯಾಸ್ಕಾಟ್ ಹೆಸರುಗಳಿಗೆ ಕ್ರಮವಾಗಿ 25 ಸಾವಿರ ರೂ., 15 ಸಾವಿರ ರೂ. ಮತ್ತು 10 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.

ಎರಡೂ ವಿಭಾಗಗಳ ವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ವಿನ್ಯಾಸ ಮತ್ತು ಹೆಸರಿನ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.

ಆಯ್ಕೆಯಾಗುವ ಮ್ಯಾಸ್ಕಾಟ್‌ ಭಾರತ ಅಂಚೆ ಇಲಾಖೆಯ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದು, ಪ್ರಚಾರ ಅಭಿಯಾನಗಳು, ಅಂಚೆ ಚೀಟಿ ಉತ್ಪನ್ನಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು, ಪ್ರದರ್ಶನಗಳು, ಸಾಮಾಜಿಕ ಜಾಲತಾಣಗಳು ಮತ್ತು ಇತರ ಅಧಿಕೃತ ಸಂವಹನಗಳಲ್ಲಿ ಬಳಸಲಾಗುತ್ತದೆ.

ವಿದ್ಯಾರ್ಥಿಗಳು, ಕಲಾವಿದರು, ವಿನ್ಯಾಸಕರು, ಸೃಜನಶೀಲ ವೃತ್ತಿಪರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಂಚೆ ಇಲಾಖೆ ಮನವಿ ಮಾಡಿದೆ. ದೇಶವ್ಯಾಪಿ ವಿನ್ಯಾಸ ಉಪಕ್ರಮದ ಮೂಲಕ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದರ ಜೊತೆಗೆ ಭಾರತ ಅಂಚೆಯ ದೃಶ್ಯ ಗುರುತನ್ನು ಬಲಪಡಿಸುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.