ಬಿಜೆಪಿ ವರ್ತನೆ, ಭಾಷೆ ನೋಡಿದರೆ ಅವರ ಸಂಸ್ಕಾರ ಅರ್ಥವಾಗುತ್ತದೆ : ಜ್ಯೋತಿ

ಕೊಪ್ಪಳ 25 : ರಾಜ್ಯದಲ್ಲಿ ಬಿಜೆಪಿ ಈ ಬಾರಿ ಎರಡಂಕಿ ದಾಟುವದು ಕಷ್ಟ ಎಂದು ಗೊತ್ತಾದ ಕೂಡಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಹೊಲಸಾಟ ಶುರು ಮಾಡಿದ್ದು, ಅದರ ನಾಯಕರು ಬಾಯಿಗೆ ಬಂದಿದ್ದನ್ನು ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಗ್ಯಾರಂಟಿ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅವರು ನಗರದ ಅನೇಕ ವಾರ್ಡುಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ಈ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ತನ್ನ ವಾಟ್ಸಾಪ್ ಯೂನಿವರ್ಷಿಟಿ ಮೂಲಕ ಜನರಿಗೆ ಮನಸೋ ಇಚ್ಛೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು ಅದೂ ಸಾಲದೆಂಬಂತೆ ಕೆಟ್ಟ ಪದಗಳ ಮೂಲಕ ರಾಜ್ಯದ ಕಾಂಗ್ರೆಸ್ ನಾಯಕರನ್ನು ಮಹಿಳೆಯರನ್ನು ಜರಿಯುತ್ತಿದ್ದಾರೆ. 

ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮಾತುಗಳ ಮೂಲಕ ಸುಮಾರಸ್ವಾಮಿಯಾಗಿದ್ದು, ಎರಡು ಸಾವಿರ ರೂಪಾಯಿ ಸರಕಾರದಿಂದ ಪಡೆದು ಮಹಿಳೆಯರು ಅಡ್ಡ ದಾರಿ ಹಿಡಿದಿದ್ದಾರೆ ಎನ್ನುತ್ತಾರೆ ಜೊತೆಗೆ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಅದರ ಕುರಿತು ದೇವೇಗೌಡರು, ಯಡಿಯೂರ​‍್ಪರು ಸಹ ಯಾವುದೇ ಸ್ಪಷ್ಟಿಕರಣ ಕೊಡುತ್ತಿಲ್ಲ ಅಂದರೆ ಅವರು ಸಹ ಇಂತಹ ಮಾತಿಗೆ ಒಪ್ಪಿಗೆ ಹೊಂದಿದ್ದಾರೆ ಎಂದು ಆರ್ಥವೇ? 

ಇನ್ನು ನಟಿ ಶೃತಿ ಸಹ ತಮ್ಮ ನಾಲಿಗೆ ಹರಿಬಿಟ್ಟಿದ್ದು ಮಹಿಳೆಯರು ಉಚಿತ ಶಕ್ತಿ ಯೋಜನೆ ಮೂಲಕ ತಮ್ಮ ಗಂಡಂದಿರಿಗೆ ಸುಳ್ಳು ಹೇಳಿ ಎಲ್ಲೆಲ್ಲೋ ಹೋಗುತ್ತಿದ್ದಾರೆ, ತೀರ್ಥ ಯಾತ್ರೆ ಮಾಡುತ್ತಿಲ್ಲ ಬೇರೆ ಎಲ್ಲೋ ಹೋಗುತ್ತಿದ್ದು ಗಂಡಂದಿರು ಕಣ್ಣೀರು ಹಾಕುತ್ತಿದ್ದಾರೆ ಎನ್ನುವದನ್ನು ನೋಡಿದರೆ ಅವರಿಗೆ ನಟಿ ಶಿರೋಮಣಿ ಪ್ರಶಸ್ತಿ ಕೊಡಬೇಕು ಎಂದಿದ್ದಾರೆ. 

ಇನ್ನು ಸಿಟಿ ರವಿ ಎಂಬ ಮನುಷ್ಯ ಸಹ ನಾಲಿಗೆ ಹರಿಬಿಟ್ಟಿದ್ದು ಅವರಿಗೆ ಬುದ್ಧಿಭ್ರಮಣೆಯಾಗಿದೆ, ಅಲ್ಲದೇ ಯಡಿಯೂರ​‍್ಪರ ಸುಪುತ್ರ ವಿಜಯೇಂದ್ರ ಕಾಂಗ್ರೆಸ್‌ನ ನಾಯಕ, ಸಚಿವ ಬಡವರ ಕಲ್ಯಾಣಕ್ಕೆ ದುಡಿಯುತ್ತಿರುವ ಸಂತೋಷ ಲಾಡ ಅವರನ್ನು ನಿಂದಿಸಿದ್ದಕ್ಕೆ ಕೂಡಲೇ ಕ್ಷಮೆ ಕೋರಬೇಕು. ಈ ಎಲ್ಲ ಮುಖಂಡರು ರಾಜ್ಯದ ಜನರ ಕ್ಷಮೆ ಕೋರಬೇಕು ವಿಶೇಷವಾಗಿ ಮಹಿಳೆಯರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು. 

ದೇಶದ ಪ್ರಧಾನಿಗಳು ಸಹ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದರೂ, ಧರ್ಮ ಸಂಘರ್ಷದ ಮೂಲಕ ಕೋಮು ಸೌಹಾರ್ಧಕ್ಕೆ ದಕ್ಕೆ ತರುವ ಮಾತನಾಡುತ್ತಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳದ ಚುನಾವಣೆ ಆಯೋಗದ ಮೇಲೆ ನಂಬಿಕೆ ಹೋಗುತ್ತಿದೆ, ಇದು ಪ್ರಜಾಪ್ರಭುತ್ವದ ಕೊಲೆ ಎಂದು ಭಾವಿಸಬೇಕಿದೆ ಎಂದ ಅವರು ಜನರು ದೇಶದ ರಕ್ಷಣೆಗೆ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮುಖಂಡರಾದ ಅಮರೇಶ ಕರಡಿ, ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅಕ್ಬರ್ ಪಾಶಾ ಪಲ್ಟನ್, ವಿರುಪಾಕ್ಷಪ್ಪ ಮೋರನಾಳ, ಮಂಜುನಾಥ ಜಿ. ಗೊಂಡಬಾಳ, ರವಿ ಕುರಗೋಡ ಯಾದವ, ಕೆಡಿಪಿ ಸದಸ್ಯೆ ನಾಗರತ್ನ ಹುಲಗಿ, ಮಹಿಳಾ ಮುಖಂಡರಾದ ಅಂಬಿಕಾ ನಾಗರಾಳ, ಕಿಶೋರಿ ಬೂದನೂರ ಇದ್ದರು.