ನಾನು-ನನ್ನದೆಂಬ ಅಹಮಿಕೆ ತೊಲಗಲಿ- ಶಂಕರಾನಂದ ಸ್ವಾಮೀಜಿ

I-let my ego get rid of me- Sankarananda Swamiji

ನಾನು-ನನ್ನದೆಂಬ ಅಹಮಿಕೆ ತೊಲಗಲಿ- ಶಂಕರಾನಂದ ಸ್ವಾಮೀಜಿ 

ವಿಜಯಪುರ 28 : ಜೀವನ ಎಂಬುದು ಸಮಸ್ಯೆ ಮತ್ತು ಸವಾಲುಗಳ ಆಗರ. ನಮ್ಮ ಜೀವನದಲ್ಲಿ ಎಲ್ಲವೂ ನನಗೆ ಸಿಕ್ಕಿದೆ ಮತ್ತು ಅಂದುಕೊಂಡಿದ್ದೆಲ್ಲ ದೊರಕಿದೆ ಎಂದರೂ ಮನುಷ್ಯ ಜನ್ಮ ಹೀಗಿದೆಯಲ್ಲ, ಅದು ಅಷ್ಟಕ್ಕೆ ಸಂತುಷ್ಟಿಯಾಗುವುದಿಲ್ಲ. ನನಗೆ ಇನ್ನು ಬೇಕು ಎನ್ನುತ್ತಾ ಬೇಕು ಬೇಕುಗಳೆಂಬ ಸಿಗದ ಮಾಯೆಯ ಬೆನ್ನು ಹತ್ತಿ ಇಡೀ ಜೀವನವನ್ನೇ ಕಳೆದು, ಬಯಸಿದ್ದು ಸಿಗದೇ ಹೋದಾಗ ಅಥವಾ ಅಂದುಕೊಂಡ ನೆರವೇರದೇ ಹೋದಾಗ ಮುಂದೆ ಜೀವನದಲ್ಲಿ ಅದಕ್ಕಾಗಿ ಕೊರಗುತ್ತಾ ಹೋಗುತ್ತೇವೆ. ಮುಂದೆ ನಮಗೆ ಒಂದು ದಿನ ಜೀವನವೆಂದರೆ ಇಷ್ಟೇನಾ? ಎಂಬ ನಕಾರಾತ್ಮಕ ಭಾವ ಮೂಡೀಜೀವನದಲ್ಲಿಜಿಗುಪ್ಸೆ ಪಡೆಯುತ್ತೇವೆ. ಇಂದಿನ ಆಧುನಿಕತೆ ಸೋಗಿನಲ್ಲಿ ಬಹುತೇಕ ಜನ ಮತ್ತು ಕುಟುಂಬಗಳು ಒಣ ಪ್ರತಿಷ್ಠೆಗಾಗಿ ಮತ್ತು ಸಮಾಜದಲ್ಲಿ ಅಂತಸ್ತು-ಸ್ಥಾನಮಾನ ಮತ್ತು ಸ್ವಾಭಿಮಾನಕ್ಕಾಗಿ ತಮ್ಮ ವರಮಾನಕ್ಕಿಂತ ಹೆಚ್ಚು ಖರ್ಚು ಮಾಡುತ್ತಾ ಜೀವನವೆಂಬ ಸಾಗರದಲ್ಲಿ ಟೈಟಾನಿಕ ಹಡಗಿನಂತಾಗಿ ಮುಳುಗಿವ ಪ್ರಸಂಗಗಳು ನಮ್ಮ ಕಣ್ಮುಂದೆ ನಡೆಯುತ್ತವೆ. ಹಿರಿಯರ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಅನುಭವದ ಮಾತಿನಂತೆ, ನಮ್ಮ ಅದಾಯದ ಇತಿಮಿತಿಯಲ್ಲಿಯೇ ಬದುಕುವದನ್ನು ಕಲಿಯಬೇಕು ಎಂದು ಪರಮಪೂಜ್ಯ ಶಂಕರಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್‌-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡ ಪ್ರವಚನದ 8ನೇ ದಿನದ ಪ್ರವಚನದಲ್ಲಿ “” ವಿಷಯ ಕುರಿತು ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಆದ್ದರಿಂದ ಡಿ.ವ್ಹಿ.ಜಿಯವರ, "ಇರುವುದೆಲ್ಲವ ಬಿಟ್ಟು ಬಾರದೆಂಬುದನ್ನು ಬಿಡು ಹರುಷಕ್ಕಿದೆ ದಾರಿ ಮಂಕುತಿಮ್ಮ" ಎಂಬ ಉಕ್ತಿಯಂತೆ, ಇಂದು ದೇವರು ನಮಗೆ ಪ್ರಸ್ತುತವಾಗಿ ಅನುಗ್ರಹಿಸಿದಂತೆ ಮತ್ತು ಕಷ್ಟಪಟ್ಟು ದುಡಿದು ಉಣ್ಣಬೇಕೆಂಬ ಮಹದಾಸೆಯೊಂದಿಗೆ ಬದುಕನ್ನು ನಡೆಸಬೇಕು. ಇದ್ದುದರಲ್ಲಿ ಬದುಕುವ ಮತ್ತು ನಮ್ಮ ಜೀವನದಲ್ಲಿ ಎದುರಾಗುವ ಸವಾಲು, ಸಮಸ್ಯೆ ಮತ್ತು ಏಳು-ಬೀಳುಗನ್ನು ಸಮರ್ಥವಾಗಿ ಎದುರಿಸುವ ಆತ್ಮಬಲವನ್ನು ಕರುಣಿಸೆಂದು ದೇವರಲ್ಲಿ ಪ್ರಾರ್ಥಿಸುತ್ತಾ ಸಮಾಜದಲ್ಲಿ ಎಲ್ಲರೊಳಗೆ ಒಂದಾಗಿ ಸುಖ-ದುಃಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು ಅಂದಾಗ ಮಾತ್ರ ನಮ್ಮ ಬದುಕು ಅರ್ಥಪೂರ್ಣ, ಸಾರ್ಥಕ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಚಿತೆ ಶವವನ್ನು ಸುಟ್ಟರೆ ಚಿಂತೆ ಜೀವಂತ ಮನುಷ್ಯನನ್ನೇ ಸುಡುತ್ತದೆ. 'ಚಿಂತೆ ಮತ್ತು ಚಿತೆ' ಈ ಎರಡು ಪದಗಳ ನಡುವೆ ಇರುವುದು ಒಂದು ಸೊನ್ನೆ ವ್ಯತ್ಯಾಸ ಮಾತ್ರ. ಅದರೆ ಬದುಕನ್ನೇ ಸುಡಬಲ್ಲಷ್ಟು ಶಕ್ತಿಶಾಲಿಯಾಗಿದೆ .ಚಿಂತೆ ಮನುಷ್ಯನನ್ನು ಬಿಟ್ಟಿದ್ದೇ ಇಲ್ಲ. ಆದ್ದರಿಂದ ನಾನು, ನನ್ನದು ಮತ್ತು ನನ್ನಿಂದಲೇ ಮಾತ್ರ ಎನ್ನುವ ಅಹಮಿಕೆಯನ್ನು ಬಿಟ್ಟು ಈ ಜಗತ್ತಿನಲ್ಲಿ ನಡೆಯುವುದು ಆ ದೇವರ ಮಹಪ್ರಸಾದವೆಂದು ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು ಎಂದು ಪರಮ ಪೂಜ್ಯ ಶಂಕರಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.  

ಈ ಕಾರ್ಯಕ್ರಮದಲ್ಲಿ ಮಕ್ಕಳಾದ ಪೂರ್ವಿ-ಪೃಥ್ವಿ ಹಿರೇಮಠ, ಸಂಸ್ಕೃತಿ ಮಿರ್ಜಿ, ಋತ್ವಿ ಹೆರಕಲ್ ಇವರು ಛದ್ಮವೇಶ ಸ್ಪರ್ಧೆದಲ್ಲಿ ಶಿವ, ಪಾರ್ವತಿ, ಆಂಜನೇಯ, ಸೀತೆ, ರಾಮ ವೇಷಧಾರಿಗಳಾಗಿ ಭಾಗವಹಿಸಿದ್ದು ಪ್ರೇಕ್ಷಕರ ಕಣ್ಮನ ಸೆಳೆಯಿತು. ನಂತರ ಶ್ರೀಶೈಲ ಬೀಳೂರ ಅವರ ನೇತೃತ್ವದ ಗಾನ ತರಂಗ ಸಂಗೀತ ಸಭಾ ಇವರಿಂದ ಸಂಗೀತ ಕಾರ್ಯಕ್ರಮದ ಜರುಗಿತು. 

ಕಾರ್ಯಕ್ರಮದಲ್ಲಿ ಗುರುಬಸಯ್ಯ ಹಿರೇಮಠ, ಡಾ. ರಾಜಕುಮಾರ ಡೊಳ್ಳಿ, ಪ್ರೊ. ಬಿ.ಎಸ್‌.ಬೆಳಗಲಿ, ಪ್ರೊ. ಎಂ.ಎಸ್‌.ಖೊದ್ನಾಪೂರ, ಸಾವಿತ್ರಿ ಹಿರೇಮಠ, ಸಾವಿತ್ರಿ ಅಗ್ರಾಣಿ, ಶೋಭಾ ಚವ್ಹಾಣ, ನಿಂಗಪ್ಪ ನಿಂಬಾಳಕರ, ಭರಮಣ್ಣ ಕಡಕೋಳ, ಕಾಶಿಲಿಂಗ ಶೇಗಾವಿ, ಅಪ್ಪಾಸಾಹೇಬ ಹಂಚಿನಾಳ, ವಿಠ್ಠಲ ಜಗತಾಪ, ಬಿ.ಎಸ್‌.ಬಿರಾದಾರ, ಆರ್‌.ಜಿ. ಉತ್ತರಕರ ಇನ್ನಿತರರು ಉಪಸ್ಥಿತರಿದ್ದರು. ಮಕ್ಕಳ ನವರಸಪುರದ ಎಲ್ಲ ಬಡಾವಣೆಗಳ ಸುಮಾರು ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಯುವಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ನಂತರ ಸದ್ಭಕ್ತರು ಮಹಾಪ್ರಸಾದ ಸೇವಿಸಿ ಶಿವನ ಕೃಪೆಗೆ ಪಾತ್ರರಾದರು.