ಹಾಸ್ಯಪ್ರಜ್ಞೆಯಿಂದ ಆಯುಷ್ಯ ಹೆಚ್ಚುತ್ತದೆ: ಹನುಮಂತಪ್ಪ ಅಂಡಗಿ

ಲೋಕದರ್ಶನ ವರದಿ

ಕೊಪ್ಪಳ 15: ಮನುಷ್ಯ ಇಂದು ಸಂಸಾರದ ಜಂಜಡದಲ್ಲಿ ಸಿಲುಕಿ ಹಾಕಿಕೊಂಡು ಒತ್ತಡದ ಬದುಕು ಸಾಗಿಸುತ್ತಿದ್ದಾನೆ. ಹೀಗಾಗಿ ಮನುಷ್ಯ ಹಲವಾರು ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಮನುಷ್ಯ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಆಯುಷ್ಯ ಹೆಚ್ಚುತ್ತದೆ. ನಮ್ಮ ಜನಪದರು ಹಾಸ್ಯಪ್ರಜ್ಞೆಯುಳ್ಳವರಾಗಿದ್ದರು. ಹೀಗಾಗಿ ಅವರು ಶತಾಯುಷಿಗಳಾಗುತ್ತಿದ್ದರು.ಕರ್ನಾಟಕದ ಪ್ರಪ್ರಥಮ ಜಾನಪದ ಗೀತೆಗಳ ಸಂಕಲನ 'ಗರತಿಯ ಹಾಡು'ದಲ್ಲಿ ಗಂಡ-ಹೆಂಡಿರ ನಡುವೆ ನಡೆಯುವ ಅನೇಕ ಹಾಸ್ಯ ಸಂಭಾಷಣೆಗಳಿವೆ. ಜನಪದರು ಮುಂಜಾನೆಯಿಂದ ಸಂಜೆಯವರೆಗೆ ನಿರಂತರವಾಗಿ ಮಾಡಿದ ದೈಹಿಕ ದಂಡನೆಯ ದಣಿವನ್ನು ಹಾಸ್ಯದ ಒಡಪುಗಳನ್ನು, ಒಗಟುಗಳನ್ನು, ಹಾಡುಗಳನ್ನು ಹೇಳುವುದರ ಮೂಲಕ  ತಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕುತ್ತಿದ್ದರು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಬೇಳೂರಿನ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸದಲ್ಲಿ 'ಜಾನಪದ ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. 

ಹಲಗೇರಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ.ಸುಮತಿ ಹಿರೇಮಠ ಅವರು 'ಜಾನಪದ ಸಾಹಿತ್ಯದಲ್ಲಿ ತವರೂರು' ಎಂಬ ವಿಷಯ ಕುರಿತು ಮಾತನಾಡುತ್ತಾ, ಜಾನಪದ ಗರತಿಗೆ ತವರು ಮನೆ ಎಂದರೆ ಪಂಚಪ್ರಾಣ. ಕನಸು ಮನಸ್ಸಿನಲ್ಲಿಯೂ ತಾಯಿ-ತಂದೆ, ಅಣ್ಣ-ತಮ್ಮ, ಅಕ್ಕ-ತಂಗಿ, ಬಂಧು-ಬಳಗ ಹೀಗೆ ತವರುಮನೆಯ ಸದಸ್ಯರನ್ನೆಲ್ಲ ನಿತ್ಯ ನೆನೆಯುತ್ತಾ ಅವರೆಲ್ಲ ಚೆನ್ನಾಗಿರಲೆಂದು ಭಗವಂತನಲ್ಲಿ ಬೇಡುತ್ತಾಳೆ ಎಂದರು. 

ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರಾದ ಮುದೇಗೌಡ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗವಿ ಇದಗಲ್ ಸ್ವಾಗತಿಸಿದರು. ಹನುಮಂತಪ್ಪ ಎಸ್.ಕೆ. ನಿರೂಪಿಸಿದರು. ಕೃಷ್ಣರೆಡ್ಡಿ ಚೆಲ್ಲಾ ವಂದಿಸಿದರು.