ಹಾನಗಲ್ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಭೆ

Hanagal Block Congress workers' meeting

ಹಾನಗಲ್ 09: 2025 ರಲ್ಲಿ ಸಾಲು, ಸಾಲು ಚುನಾವಣೆ ಎದುರಾಗಲಿವೆ. ಹಾಗಾಗಿ ಈ ವರ್ಷ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಶಕ್ತಿ ತುಂಬಿ, ಅಧಿಕಾರ ನೀಡುವ ವರ್ಷವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

ಇಲ್ಲಿನ ಡಾ.ಬಾಬು ಜಗಜೀವನರಾಂ ಭವನದಲ್ಲಿ ನಡೆದ ಹಾನಗಲ್ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಪಂ, ತಾಪಂ, ಗ್ರಾಪಂ ಮತ್ತು ಪುರಸಭೆ ಚುನಾವಣೆಗಳು ಇದೇ ವರ್ಷ ನಡೆಯಲಿವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸಂದರ್ಭ ಇದಾಗಿದೆ. ಏನನ್ನೂ ನೀರೀಕ್ಷೆ ಮಾಡದೇ ಹಗಲಿರುಳು ಪಕ್ಷದ ಏಳಿಗೆಗೆ ದುಡಿಯುವ ಕಾರ್ಯಕರ್ತ ಬಳಗ ತಾಲೂಕಿನಲ್ಲಿ ದೊಡ್ಡದಿದೆ. ಅವರ ಕೈಗೂ ಅಧಿಕಾರ ಕೊಡಬೇಕಿರುವುದನ್ನು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದರು.  ಕೇಂದ್ರ ಸರ್ಕಾರದ ಅಸಹಕಾರ ಮುಂದುವರೆದಿದ್ದು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಅನ್ಯಾಯ ಸರಿಪಡಿಸಿ, ನ್ಯಾಯ ದೊರಕಿಸಿ ಎಂದು ಕೇಳುವ ಧೈರ್ಯವೂ ಬಿಜೆಪಿ ಸಂಸದರಿಗೆ ಇಲ್ಲದಂತಾಗಿದೆ. ನ್ಯಾಯಸಮ್ಮತ ಅನುದಾನ ಕೇಂದ್ರದಿಂದ ಬಿಡುಗಡೆಯಾಗದೇ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜನರಿಗೆ ಪದೇ ಪದೆ ತಿಳಿ ಹೇಳುವ ಕೆಲಸ ನಮ್ಮ ಕಾರ್ಯಕರ್ತರಿಂದ ನಡೆಯಬೇಕಿದೆ. ತಪ್ಪು ತಿಳಿವಳಿಕೆಗೆ ಒಳಗಾಗದೇ ನಮ್ಮ ಕಾರ್ಯಕರ್ತರೇ ಗೊಂದಲಕ್ಕೆ ಸಿಲುಕಬಾರದು. ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಜನಕಲ್ಯಾಣದ ಛಲ ತಮ್ಮಲ್ಲಿದ್ದು, ಕಾರ್ಯಕರ್ತರು, ಮತದಾರರು ಕೊಟ್ಟಿರುವ ಅವಕಾಶ, ಶಕ್ತಿ ಬಳಸಿ ನೀರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. 

 ಕೆಪಿಸಿಸಿ ಸದಸ್ಯರಾದ ಖ್ವಾಜಾಮೊಹಿದ್ದೀನ್ ಜಮಾದಾರ, ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಸೇರಿದಂತೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.-ಬಾಕ್ಸ್‌  ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಸಹ ತಳ ಹಂತದಲ್ಲಿ ಪಕ್ಷದ ಬೇರು ಸದೃಢಗೊಳಿಸಬೇಕಿದೆ. ವಿರೋಧಿಗಳು ಎಷ್ಟೇ ಗೊಂದಲ ಮೂಡಿಸುವ ಪ್ರಯತ್ನ ಮಾಡಿದರೂ ತಲೆ ಕೆಡಿಸಿಕೊಳ್ಳದೇ ಸಂಘಟನೆ ಬಲಗೊಳಿಸಲು ಶ್ರಮ ವಹಿಸಬೇಕಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲ ವರ್ಗಗಳಿಗೆ ನ್ಯಾಯ ದೊರಕಲಿದೆ.