ಹಾವೇರಿ 11 : ಶಿಕ್ಷಕರೆಂದರೆ ಎರಡನೇ ತಾಯಿ ಇದ್ದಂತೆ ಎಂಬುದು ವೇದವಾಕ್ಯ. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಪ್ರತಿ ಮಗುವಿನ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಶಿಕ್ಷಕರ ಪಾಲು ದೊಡ್ಡದಿದೆ ಎಂದು ಶಿಕ್ಷಕಿ ಲಲಿತಾ ಪಾಟೀಲ ಹೇಳಿದರು.ಹಾವೇರಿ ಶಹರದ ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಚನಬಸಪ್ಪ ಮಾಗಾವಿ ಪ್ರೌಢಶಾಲೆಯ ಹಳೇಯ ವಿದ್ಯಾರ್ಥಿಗಳು ಜ್ಞಾನಗಂಗಾ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಮಗೆ ಕಲಿಸಿದ ಶಿಕ್ಷಕರಿಗೆ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದು ವಿಶ್ವ ಅಮ್ಮಂದಿರ ದಿನವೂ ಹೌದು. ತನ್ಮೂಲಕ ಅಮ್ಮಂದಿರ ದಿನದಂದು ಹಳೆಯ ವಿದ್ಯಾರ್ಥಿಗಳು ನೀಡಿದ ಈ ಅಮೂಲ್ಯ ಕ್ಷಣ ಜೀವಮಾನದ ಒಂದು ಅಮೃತ ಘಳಿಗೆ ಎಂದರೆ ತಪ್ಪಾಗಲಾರದು ಎಂದು ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯಾಧ್ಯಾಪಕ ಜೆ.ಎಸ್. ಬಣಕಾರ, ನಿವೃತ್ತ ಶಿಕ್ಷಕರಾದ ಎಸ್.ಎಲ್. ಕಾಡದೇವರ ಮಠ, ನವಲೆ ಹಾಗೂ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಮುಗದೂರ ಮಾತನಾಡಿ, ಸುಮಾರು 30-35 ವರ್ಷಗಳ ಹಿಂದೆ ನಮ್ಮ ಕೈಯಲ್ಲಿ ಅಧ್ಯಯನ ಮಾಡಿದ ಮಕ್ಕಳ ನೆನಪಿನ ಅಂಗಳದಲ್ಲಿ ನಾವು ಇಂದಿಗೂ ಇದ್ದೇವೆ ಎಂಬುದೇ ನಮಗೆ ಅತಿ ದೊಡ್ಡ ಕೊಡುಗೆ. ವಿಶ್ವದ ಪ್ರತಿ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅಗ್ರಗಣ್ಯ ಎಂಬುದನ್ನು ಕೇಳಿದ್ದೆವು. ಆದರೆ ಇಲ್ಲಿ ಎಲ್ಲಾ ವೃತ್ತಿಯಲ್ಲಿರುವವರು ನಮ್ಮ ಮಕ್ಕಳನ್ನು ಕಂಡಾಗ ಕಣ್ಣು ತುಂಬಿ ಬಂದಿವೆ. ನಿಮ್ಮೆಲ್ಲರ ಪ್ರೀತಿ ಮತ್ತು ನೀಡಿದ ಈ ಗುರುವಂದನೆ ಸ್ಮರಣೀಯ ಎಂದು ಮನದುಂಬಿ ಹಾರೈಸಿದರು.ಈ ಗುರುವಂದನಾ ಕಾರ್ಯಕ್ರಮದಲ್ಲಿ 1991-1992ರಿಂದ 2015-16ನೇ ಸಾಲಿನ ವರೆಗಿನ ಹಳೇಯ ವಿದ್ಯಾರ್ಥಿಗಳು ಪಾಲ್ಗೊಂಡು ಗುರುನಮನ ಸಲ್ಲಿಸಿದರು. ಇದೇ ವೇಳೆ ಗುರುವಂದನಾ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುಮಾರು 29 ಹಳೆಯ ವಿದ್ಯಾರ್ಥಿಗಳು ಮತ್ತು ಅವರ ಮಕ್ಕಳು ರಕ್ತದಾನ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಿಸಿದರು. ಈ ವೇಳೆ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ರಕ್ತ ಸಂಗ್ರಹಣೆ ಮಾಡಲಾಯಿತು.
ಇದೇ ವೇಳೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲೆಯಲ್ಲಿ ಬಾಲ ಮಕ್ಕಳ ಸಹಾಯಕರಾಗಿ ಕೆಲಸ ಮಾಡಿದ ಗಂಗಮ್ಮ, ಜೋಶಿ, ಹಾವನೂರ, ರಂಗಣ್ಣ, ಎಸ್.ಪಿ.ಡಾಣಿಗಲ್ಲ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಹಳೆಯ ವಿದ್ಯಾರ್ಥಿಗಳಾದ ಡಾ.ಶ್ರವಣ ಪಂಡಿತ, ಚನ್ನಬಸಪ್ಪ ಹಲಗಣ್ಣನವರ, ಗಂಗಾಧರ ಪಾಟೀಲ, ಪ್ರದೀಪ ಮುಳ್ಳೂರ, ಶಂಭುಲಿಂಗಪ್ಪ ದುರ್ಗದ, ಸೋಮಶೇಖರ ಎಣ್ಣಿ, ಶಿವಯೋಗಿ ಹೊಸಗೌಡ್ರ, ಶಿವಯೋಗಿ ಕೊಳ್ಳಿ, ರವಿರಾಜ ಶೆಟ್ಟರ, ಉಮಾ ಮುಗದೂರ, ಶಿಲ್ಪಾ ಗಾಣಿಗೇರ, ರೋಹಿಣಿ ಪಾಟೀಲ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.