ನೇಹಾ ಹತ್ಯೆ ಪ್ರಕರಣವನ್ನು ಸರ್ಕಾರ ತನ್ನದೇ ರೀತಿಯಲ್ಲಿ ನಿಭಾಯಿಸುತ್ತದೆ; ಡಿಕೆ ಶಿವಕುಮಾರ್

ಬೆಂಗಳೂರು: ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸುವುದಕ್ಕೆ ತಮ್ಮ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ತಮ್ಮ ಸರ್ಕಾರ ಪ್ರಕರಣವನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.

ಕಳೆದ ವಾರ ಬಿವಿಬಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ಕೊಲ್ಲಲ್ಪಟ್ಟ ಕಾಂಗ್ರೆಸ್ ಕೌನ್ಸಿಲರ್‌ನ ಮಗಳು ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಜೆಪಿ ಒತ್ತಾಯಿಸಿದ್ದು, ಪೊಲೀಸರು ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಹುಬ್ಬಳ್ಳಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದರಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ. ಅವರು ಹಸ್ತಾಂತರಿಸಲಿ, ಅವರು ಏನು ಬೇಕಾದರೂ ಮಾಡಲಿ. ಆದರೆ, ಸರ್ಕಾರ ಈ ಪ್ರಕರಣವನ್ನು ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ, ಅದರಲ್ಲಿ ಯಾವುದೇ ಪ್ರಶ್ನೆಯಿಲ್ಲ' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ಯುವತಿಯ ತಂದೆ ನಿರಂಜನ ಹಿರೇಮಠ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದು, ಪ್ರಕರಣದ ಉಸ್ತುವಾರಿ ವಹಿಸಿರುವ ಪೊಲೀಸ್ ಕಮಿಷನರ್ ಅವರನ್ನು ನಿರ್ಲಕ್ಷ್ಯ ಆರೋಪದ ಮೇಲೆ ವರ್ಗಾವಣೆ ಮಾಡಬೇಕು ಎಂದಿದ್ದರು.

ಇದಕ್ಕೂ ಮುನ್ನ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದರು.

ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಫಯಾಜ್ ಖೋಂಡುನಾಯಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನೇಹಾ ಮೊದಲ ವರ್ಷದ ಎಂಸಿಎ ವಿದ್ಯಾರ್ಥಿನಿ ಮತ್ತು ಫಯಾಜ್ ಮಾಜಿ ಸಹಪಾಠಿಯಾಗಿದ್ದ.

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು. ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತಿಳಿಸಿದ್ದಾರೆ.

ತಮ್ಮ ಪುತ್ರಿಯ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ನೇಹಾ ತಂದೆ ನಿರಂಜನ್ ಹಿರೇಮಠ ಸ್ವಾಗತಿಸಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಿದ್ದು ತಮಗೆ ತೃಪ್ತಿ ತಂದಿದೆ ಎಂದಿದ್ದಾರೆ.