ಫಸಲಿಗೆ ಸೂಕ್ತ ಬೆಲೆ ಸಿಕ್ಕರೆ ಮಾತ್ರ ರೈತನ ಪರಿಶ್ರಮ ಸಾರ್ಥಕ: ಡಾ.ಕಟ್ಟಿ

ಮುಧೋಳದಲ್ಲಿ ಸಂಭ್ರಮದ ರೈತ ದಿನಾಚರಣೆ* ರೈತವೇಶದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳು* ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ 

ಮುಧೋಳ 24: ರೈತರು ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಕ್ಕರೆ ಮಾತ್ರ ರೈತನ ಪರಿಶ್ರಮ ಸಾರ್ಥಕವಾಗಿ ಬದುಕು ಹಸನಾಗುತ್ತದೆ ಎಂದು ರೋಹಿಣೀ ಸಮೂಹ ಸಮೂಹ ಸಂಸ್ಥೆಯ ವ್ಯವಸ್ಥಾಪಕ ಡಾ.ಎಂ.ವೈ.ಕಟ್ಟಿ ಹೇಳಿದರು. 

ಶನಿವಾರ ನಗರದ  ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಕನ್ನಡ ಮಾಧ್ಯಮ ಹಾಗೂ ಸಿ.ಬಿ.ಎಸ್‌.ಇ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಸಾಧಕ ರೈತರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ  ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು. 

ಪರಿಶುದ್ಧವಾದ ಮಣ್ಣು ಹಾಗೂ ಮಣ್ಣಲ್ಲಿ ಬೆಳೆಯುವ ಬೆಳೆಗಳು ಇಂದು ಅಪಾಯಕಾರಿ ಮಟ್ಟ ಮೀರಿ ವಿಷಕಾರಿಯಾಗುತ್ತಿದ್ದು ಅದನ್ನು ತಡೆಗಟ್ಟಲು ಯುವ ರೈತರು ಹಾಗೂ ಭಾವಿ ರೈತರು ಮುಂದಾಗಬೇಕು,ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರೈತರ ಬದುಕು ಹಾಗೂ ಕೃಷಿಯನ್ನು ಪರಿಚಯಿಸುವ ಕಾರ್ಯವಾಗಬೇಕಾಗಿದೆ, ಸರಕಾರ ರೈತರಿಗೆ ಹಾಗೂ ಜನಸಾಮಾನ್ಯರಿಗಾಗಿ ಹಲವಾರು ಯೋಜನೆ ಅನುಷ್ಠಾನಗೊಳಿಸಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರೈತರಿಗೆ ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಜಿ.ಪಂ.ಅಧ್ಯಕ್ಷ ಶಿವಕುಮಾರ ಮಲಘಾಣ ಮಾತನಾಡಿ ಶಿಕ್ಷಣದ ಜೊತೆಗೆ ನಮ್ಮ ಪರಂಪರೆಯ ಕೃಷಿಯನ್ನು ಜನರಿಗೆ ತಲುಪಿಸುವ ಕಾರ್ಯ ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯವಾಗಿದ್ದು ವಿದ್ಯಾರ್ಥಿ ದೆಸೆಯಲ್ಲಿಯೇ ರೈತ,ಕೃಷಿ ಪರವಾಗಿ ಮಕ್ಕಳು ಮುನ್ನಡೆಯಬೇಕು ಎನ್ನುವ ಸದುದ್ದೇಶದಿಂದ ಈ ಕಾರ್ಯಕ್ರಮ ಪ್ರತಿ ವರ್ಷ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಬರುವ ದಿನಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ನಿಮ್ಮ ಸಲಹೆಯೊಂದಿಗೆ ಮುನ್ನಡೆಯುತ್ತೇವೆ ಎಂದು ಹೇಳಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ  ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ ಮಾತನಾಡಿ ತ್ರಿವೇಣಿ ಶಿಕ್ಷಣ ಸಂಸ್ಥೆ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿಲ್ಲ ಬದಕು ಕಟ್ಟಿಕೊಡುವ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಅದನ್ನು ಫಲವಾಗಿ ಇಂದು ಕೃಷಿ ದಿನಾಚರಣೆಯ ಮೂಲಕ ತೆರೆಯ ಮರೆಯಲ್ಲಿರುವ ರೈತರ ಕಾರ್ಯ ಗುರುತಿಸುವ ಕಾರ್ಯ ಮಾಡಲಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ರಾಜ್ಯ ಕಬ್ಬು ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಸುಬಾಸ ಶಿರಬೂರ, ನಿರ್ದೇಶಕರಾದ ಬಸವರಾಜ ಹುಗ್ಗಿ, ಕಾರ್ಯಾಧ್ಯಕ್ಷ ಶಿಶಿರ ಮಲಘಾಣತಾ.ಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ರೈತ ಮುಖಂಡ ದುಂಡಪ್ಪ ಯರಗಟ್ಟಿ, ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಆಡಳಿತಾಧಿಕಾರಿ ಮಲ್ಲು ಕಳ್ಳೆನ್ನವರ, ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ, ಪ್ರಾಚಾರ್ಯ ಡಾ.ಎಸ್‌.ಖಾನ್ ಇದ್ದರು. 

ಕು.ವೈದೇಹಿ ಚೌಗಲೆ ,ಕು.ಸಹನಾ ಪೋತರಡ್ಡಿ ಸ್ವಾಗತಿಸಿ, ಕು.ಸುಷ್ಮಾ ಅನವಾಲ,ತೇಜಸ್ವಿನಿ ಕುಂಬಾರ ನಿರೂಪಿಸಿ, ಕು.ರಿಯಾನಾ ಮುಲ್ಲಾ,ಕೀರ್ತಿ ಯಳಮೇಲಿ ಪ್ರಶಸ್ತಿ ವಿತರಣೆ ಮಾಡಿ, ವರ್ಷಾ ವಾಯಂಗಡೆ, ಸೌಮ್ಯ ಕಳ್ಳೆನ್ನವರ ವಂದಿಸಿದರು. 

ಪ್ರಶಸ್ತಿ ಪ್ರಧಾನ: ಕುಳಲಿಯ ಯುವ ರೈತ ಶಿವಾನಂದ ಗಣಿ, ಉತ್ತೂರದ ಯುವ ರೈತ ಬಸವರಾಜ ಮಠಪತಿ, ಬಬಲೇಶ್ವರದ ರೈತ ಮಹಿಳೆ ಲಕ್ಷ್ಮೀ ಶಿರಮಗೊಂಡ, ಮಹಾಲಿಂಗಪುರದ ರೋಹಿಣಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಎಮ್‌.ವೈ.ಕಟ್ಟಿ ಅವರಿಗೆ ಸಂಗಮನ ಕೃಷಿ ಋಷಿ ಹಾಗೂ ಕೃಷಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.