ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ವಿಜಯದ ಮೆಟ್ಟಿಲುಗಳು : ಡಾ. ಆನಂದ
ಧಾರವಾಡ 24: ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ವಿಜಯದ ಮೆಟ್ಟಿಲುಗಳು, ಪರೀಕ್ಷೆಗಳ ಬಗ್ಗೆ ವಿನಾಕಾರಣ ಭಯ ಪಡದೇ ಸಂಭ್ರಮದಿಂದ ಆನಂದಿಸಬೇಕು ಎಂದು ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಕರ್ನಾಟಕ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ “ಏಕಾಗ್ರತೆಯ ಅಧ್ಯಯನ ಮಾಡುವುದು ಹೇಗೆ?’ ವಿಷಯ ಕುರಿತು ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಬಾರದು. ಅಧ್ಯಯನ ಮಾಡುವಾಗ ಪ್ರಾಮಾಣಿಕತೆ, ನಿರ್ದಿಷ್ಟಗುರಿ, ಸಮಯ ಪರಿಪಾಲನೆಯೊಂದಿಗೆ ಅಧ್ಯಯನ ಮಾಡಬೇಕು. ಸಮಯವು ಹಣಕ್ಕಿಂತಲೂ ಬೆಲೆಯುಳ್ಳದ್ದು. ಮನಸ್ಸು ಗೊಂದಲವಿದ್ದಾಗ ಓದಬಾರದು. ಅದು ನಿಮ್ಮ ಏಕಾಗ್ರತೆಗೆಭಂಗ ಉಂಟು ಮಾಡುತ್ತದೆ. ಉತ್ತೀರ್ಣತೆಯ ಬಗ್ಗೆ ವಿನಾಕಾರಣ ಭಯಬೇಡ. ನಾನು ಹೆಚ್ಚು ಅಂಕ ಗಳಿಸುತ್ತೇನೆಂಬ ದೃಢ ಸಂಕಲ್ಪವಿರಲಿ. ಇದುವೇ ಆತ್ಮ ವಿಶ್ವಾಸ ಎಂದು ಹೇಳಿದರು.
ಡಿಮ್ಹಾನ್ಸ್‌ನ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಓದಬೇಕು. ನಿಮ್ಮದೇ ಆದ ಯೋಜನೆ ಮುಖ್ಯ. ಓದುವುದನ್ನು ಬಿಟ್ಟು ವಿನಾಕಾರಣ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಿರಂತರ ಅಧ್ಯಯನ ಮಾಡದೇ ಅಲ್ಪ ವಿಶ್ರಾಂತಿಗೂ ಸಮಯ ನೀಡಿರಿ. ಸಾತ್ವಿಕ ಆಹಾರ ಸೇವನೆ ಮಾಡಬೇಕು. ಏಕಾಗ್ರತೆಗೆ ಭಂಗ ತರುವ ಸನ್ನಿವೇಶಗಳನ್ನು ತಿರಸ್ಕರಿಸಿರಿ. ಪುನರಾವರ್ತನೆ, ಗುಂಪು ಅಧ್ಯಯನದಿಂದ ವಿಷಯದ ಮನನವಾಗುತ್ತದೆ ಎಂದು ಹೇಳಿ, ವಿದ್ಯಾರ್ಥಿಗಳೊಂದಿಗೆ ಏಕಾಗ್ರತೆ ಕುರಿತು ಸಂವಾದ ನಡೆಸಿದರು.
ವಿಜ್ಞಾನಿಗಳಾದ ಶ್ರೀಧರ ಉದಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಓದಿಗೆ ಕೊಡುವಷ್ಟು ಗಮನವನ್ನು ಬರವಣಿಗೆಗೂ ಕೊಡಬೇಕು. ನಿಮ್ಮ ಬರವಣಿಗೆ ಮೌಲ್ಯಮಾಪಕದ ಮೇಲೆ ಪ್ರಭಾವ ಬೀರುವಂತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಮಾತನಾಡಿ, ಕ.ವಿ.ವ. ಸಂಘ ಈ ನಾಡಿನ ಹೆಮ್ಮೆಯ ಸಂಸ್ಥೆ. ವಿದ್ಯೆಯ ಬೆಳವಣಿಗೆಗಾಗಿ ನಿರಂತರ 134 ವರ್ಷಗಳಿಂದ ಶ್ರಮಿಸುತ್ತಿದೆ. ಶಿಕ್ಷಣ ಮಂಟಪದ ಈ ಕಾರ್ಯ ಫಲ ನೀಡಲಿದೆ ಎಂದು ಹೇಳಿದರು.
ಉಪ ಪ್ರಾಚಾರ್ಯ ಎನ್. ಎನ್. ಸವಣೂರ ಸ್ವಾಗತಿಸಿದರು, ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾದೇವಿ ನಿರೂಪಿಸಿದರು. ಪದ್ಮಾವತಿ ಅಂಗಡಿ ವಂದಿಸಿದರು. ಕಾರ್ಯಕ್ರಮದಲ್ಲಿ ವ್ಹಿ. ಬಿ. ಶಿಂಗೆ, ಕೆ.ಸಿ. ಪ್ರಕಾಶ, ಲಕ್ಷ್ಮಿ ಪಾಟೀಲ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಪ್ರಜ್ಞಾ ಗಲಗಲಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.