ಅಲಂಕಾರ ಮಾತ್ರವಲ್ಲ; ಆತ್ಮವಿಶ್ವಾಸ, ಸಂಸ್ಕೃತಿಯ ಸಂಕೇತವೂ ಹೌದು ಕಿವಿಯೋಲೆ

ಅಲಂಕಾರ ಮಾತ್ರವಲ್ಲ; ಆತ್ಮವಿಶ್ವಾಸ, ಸಂಸ್ಕೃತಿಯ ಸಂಕೇತವೂ ಹೌದು ಕಿವಿಯೋಲೆ  Earrings are not merely an adornment; they are also a symbol of self-confidence and culture

ಬಾಗಲಕೋಟೆ 11:  ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ, ಅವು ನಮ್ಮ ಜೀವನದ ಅವಿಭಾಜ್ಯ ಭಾಗ. ಕೆಲವು ಸಾಂಪ್ರದಾಯಿಕ ಆಚರಣೆಗಳು ಕಣ್ಮರೆಯಾಗುತ್ತಿದ್ದರೆ, ಇನ್ನು ಕೆಲವು ಆಧುನಿಕ ಟ್ರೆಂಡ್ಗಳ ಹೆಸರಿನಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿವೆ. ಇಂತಹ ಬದಲಾವಣೆಗೆ ಕಿವಿಯೋಲೆಗಳೂ ಹೊರತಾಗಿಲ್ಲ.  ಶಾಸ್ತ್ರ-ಸಂಪ್ರದಾಯಗಳ ಹೆಸರಿನಲ್ಲಿ ಆರಂಭವಾದ ಕಿವಿ ಚುಚ್ಚುವ ಆಚರಣೆ ಇಂದು ಮಹಿಳೆಯರ ಸೌಂದರ್ಯವರ್ಧನೆಯ ಮೊದಲ ಹೆಜ್ಜೆಯಾಗಿ ರೂಪಾಂತರಗೊಂಡಿದೆ. ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸಿ ಓಲೆ ಹಾಕಿಸುವ ಪದ್ಧತಿ ನಮ್ಮ ದೇಶದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಕಾಲಕ್ರಮೇಣ ಇದು ಮಹಿಳೆಯರ ಸೌಂದರ್ಯದ ಅವಿಭಾಜ್ಯ ಭಾಗವಾಗಿದ್ದು, ಆಭರಣಗಳ ಪೈಕಿ ಕಿವಿಯೋಲೆಗಳಿಗೆ ವಿಶೇಷ ಸ್ಥಾನ ದೊರೆತಿದೆ.  

ಕಿವಿಯೋಲೆ ಕೇವಲ ಆಭರಣವಲ್ಲ  

ಸರ, ಬಳೆ, ಕಿವಿಯೋಲೆ, ಕಂಠಹಾರ ಸೇರಿದಂತೆ ಹಲವು ಆಭರಣಗಳಿದ್ದರೂ ಮಹಿಳೆಯರ ಕಿವಿಯಲ್ಲಿ ತೂಗುವ ಪುಟ್ಟ ಓಲೆ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಕಿವಿಯೋಲೆ ಕೇವಲ ಆಭರಣವಲ್ಲ; ಅದು ಭಾರತೀಯ ಸಂಸ್ಕೃತಿಯ ಸಂಕೇತ ಹಾಗೂ ಆತ್ಮವಿಶ್ವಾಸದ ಪ್ರತೀಕವೂ ಹೌದು.  ಕನ್ನಡಿಯ ಮುಂದೆ ನಿಂತು ತನ್ನ ಕಿವಿಯೋಲೆಯನ್ನು ಸರಿಪಡಿಸಿಕೊಳ್ಳುವಾಗ ಯುವತಿಯ ಮುಖದಲ್ಲಿ ಮೂಡುವ ಮಂದಹಾಸವೇ ಆ ಆಭರಣದ ನಿಜವಾದ ಸೌಂದರ್ಯವನ್ನು ಹೆಚ್ಚಿಸುತ್ತದೆ.  ಜ್ಯೋತಿಷ್ಯ ಹಾಗೂ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಚಿನ್ನದ ಓಲೆ ಧರಿಸುವುದರಿಂದ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳಷ್ಟೇ ಅಲ್ಲದೆ, ಕಿವಿಯೋಲೆ ಧರಿಸುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಕೆಲವು ಪ್ರಯೋಜನಗಳಿವೆ ಎಂಬ ನಂಬಿಕೆಯಿದೆ.