ಡಾ.ಯಶವಂತ ಸರದೇಶಪಾಂಡೆ ಅವರ ಹೊಸ ನಾಟಕ
ಧಾರವಾಡ 23: ನಮ್ಮ ತಂಡವು ಅಮರ ಮಧುರ ಪ್ರೇಮ ಎಂಬ ಹೊಸ ನಾಟಕವನ್ನು ತಯಾರಿಸಿದೆ. ಹಿರಿಯ ನಾಗರಿಕರ ಸುತ್ತ ಹೆಣೆದ ಈ ನಾಟಕವು ನುರಿತ ಕಲಾವಿದರಿಂದ, ಇದೇ ಏಪ್ರಿಲ್ 26 ರಂದು, ಶನಿವಾರ ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಬೆಳಗಾವಿಯ ಸತೀಶ ಕುಲಕರ್ಣಿ ಮತ್ತು ರಮೇಶ ರಾಮಗುರವಾಡಿ ಅವರ ಸಹಯೋಗದಲ್ಲಿ ಈ ಪ್ರದರ್ಶನ ನಡೆಯಲಿದೆ.
ಈಗಾಗಲೇ ಬೆಂಗಳೂರು ಮತ್ತು ಧಾರವಾಡದಲ್ಲಿ ಯಶಸ್ವಿ ಪ್ರದರ್ಶನ ಕಂಡ ಈ ನಾಟಕ, ವಯೋವೃದ್ಧರ ವಿವಾಹ ಪ್ರಸಂಗದ, ಸಂಮೃದ್ಧ ಸಂಭಾಷಣೆಯ, ಸುಂದರ ಹಾಸ್ಯ ನಾಟಕ 'ಅಮರ ಮಧುರ ಪ್ರೇಮ'. ಕನ್ನಡ ಟೆಲಿವಿಷನ್ ಲೋಕದ ಜನಪ್ರಿಯ ಜೋಡಿ ವೀಣಾ ಮತ್ತು ಸುಂದರ ಅವರು ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಮರಾಠಿಯಲ್ಲಿ ಪ್ರಸಿದ್ಧ ನಾಟಕಕಾರ ಹೇಮಂತ ಎದಲಬಾದಕರ್ ಬರೆದದ್ದನ್ನ ಕನ್ನಡಕ್ಕೆ ಅನುವಾದಿಸಿ, ನಟಿಸಿ, ನಿರ್ದೇಶಿಸಿದವರು ಹುಬ್ಬಳ್ಳಿಯ ರಂಗ ಕಲಾವಿದ ಡಾ ಯಶವಂತ ಸರದೇಶಪಾಂಡೆ.
ರಂಗ ಸಜ್ಜಿಕೆ, ಹಿನ್ನೆಲೆ ಸಂಗೀತ, ಶೀರ್ಷಕ ಗೀತೆ, ವಸ್ತ್ರವಿನ್ಯಾಸ, ಬೆಳಕು ಸಂಯೋಜನೆಗಳು ಸರಳ ಮತ್ತು ಆಕರ್ಷಕವಾಗಿವೆ. ಪ್ರವೀಣ್ ಡಿ ರಾವ್ ಅವರ ಸಂಗೀತ, ಜೀವನ್ ಫನಾಂರ್ಡಿಸ್, ಪ್ರದೀಪ ಮುಧೋಳ ಅವರುಗಳ ರಂಗಸಜ್ಜಿಕೆ ಮತ್ತು ವ್ಯವಸ್ಥೆ, ನಾಗರಾಜ ಪಾಟೀಲ್ ಅವರ ಬೆಳಕು ವಿನ್ಯಾಸ ಆಕರ್ಷಕವಾಗಿವೆ.
ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗ ಪ್ರದರ್ಶನಗಳಿಂದ ಖ್ಯಾತರಾಗಿರುವ ಯಶವಂತ ಸರದೇಶಪಾಂಡೆ ತಂಡದವರು ಈ ಪ್ರಸ್ತುತಿಯಲ್ಲೂ ಹೊಸತನವನ್ನು ತುಂಬುವುದರ ಜೊತೆಗೆ ಸ್ವಚ್ಛ, ಸುಂದರ, ಹಾಸ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಧಾನಿಯ ರಂಗರಸಿಕರ ಜನಮನ ಗೆದ್ದಿರುವ 'ಅಮರ ಮಧುರ ಪ್ರೇಮ' ಸುಂದರ ಹಾಸ್ಯ ನಾಟಕ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರದರ್ಶೀಸುವ ಯೋಜನೆ ಹೊಂದಿಗೆ. ಎಂದಿನಂತೆ ತಾವುಗಳು ನಮ್ಮ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ : ನಾಗರಾಜ ಪಾಟೀಲ 97433 10950