ಓದುಗರನ್ನು ಸೆಳೆವ ಡಾ.ಕಿನ್ನಾಳರ ಕಥೆಗಳು ಗಮನಾರ್ಹ: ಡಾ. ಅರವಿಂದ ಪಾಟೀಲ್

ಹೊಸಪೇಟೆ  20: ಕೌಟುಂಬಿಕ ಹಿನ್ನೆಲೆಯಲ್ಲಿ ಡಾ.ದಯಾನಂದ ಕಿನ್ನಾಳರು ತಾವು ಕಂಡುಂಡ ನೋವಿನ ನೈಜಚಿತ್ರಗಳು ಕಥಾರೂಪಕಗಳಾಗಿ ಗಮನ ಸೆಳೆಯುತ್ತವೆ ಎಂದು ಹಿರಿಯ ವೈದ್ಯ ಹಾಗೂ ಸಾಹಿತಿ ಡಾ.ಅರವಿಂದ ಪಾಟೀಲ್ ತಿಳಿಸಿದರು. 

ದಯಾನಂದ ಕಿನ್ನಾಳರ “ಧರ್ಮೋಜಯ” ಎನ್ನುವ ಕಥಾ ಸಂಕಲನ ಕುರಿತು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನ.20ರ ಮಧ್ಯಾಹ್ನ 11.30ಕ್ಕೆ ಬಂಡಾಯ ಸಾಹಿತ್ಯ ಸಂಘಟನೆಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಗ್ರಾಮೀಣ ಪರಿಸರದಲ್ಲಿ ಅನುಭವಿಸಿದ ಕಷ್ಟ ಮತ್ತು ನಷ್ಟಗಳನ್ನೇ ಕಥೆಗಳಾಗಿ ಕಿನ್ನಾಳರು ಬರೆದಿದ್ದಾರೆ. ನಮ್ಮ ತಲೆಮಾರಿನ ಎಲ್ಲಾ ಓದುಗರು ಗ್ರಾಮೀಣ ಪರಿಸರದಿಂದಲೇ ಬೆಳೆದು ಬಂದವರಾಗಿರುವುದರಿಂದ; ಅಲ್ಲಿನ ಪರಿಸರದಲ್ಲಿ ಅನುಭವಿಸಿದ ನೋವುಗಳು ನಮ್ಮ ಜೀವನದಲ್ಲೂ ನಡೆದಿವೆ ಏನೋ ಎನ್ನುವಂತೆ ಕಥೆಗಳು ಕಣ್ಣುಕಟ್ಟುತ್ತಾ ಹೋಗುತ್ತವೆ. ಅಲ್ಲದೆ ಕಿನ್ನಾಳರು, ವೈದ್ಯಕೀಯ ಕ್ಷೇತ್ರದ ಬಗ್ಗೆಯೂ ಅನೇಕ ಕಥೆಗಳನ್ನು ಬರೆದಿರುವುದರಿಂದ ಆರೋಗ್ಯ ಸುಧಾರಣೆಯಲ್ಲಿ ಎಲ್ಲಾ ಪದ್ಧತಿಗಳು ಸಹ ಪ್ರಮುಖವಾಗಿ. ಆದರೆ ಅವುಗಳು ವೈಜ್ಞಾನಿಕವಾಗಿ ಜನೋಪಯೋಗಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಅಭಿವ್ಯಕ್ತಿಸಿರುವ ಕಥೆಗಳು ಮತ್ತಷ್ಟು ಗಮನ ಸೆಳೆಯುತ್ತವೆ. 

 ‘ಅಪ್ಪ-ಅವ್ವ’ ಎನ್ನುವ ಕಥೆಯಲ್ಲಿ ತಂದೆಯ ವಿಶೇಷ ಕಸುಬಾದ ಕುಲಾಯಿ, ಮಚ್ರದಾನಿ (ಸೊಳ್ಳೆಪರದೆ), ಕಸೂತಿಯಿಂದ ಕೂಡಿದ ಅಜ್ಜಿಯ ಅಡಿಕೆ ಚೀಲ, ಐದು ಪದರಿನ ಬಟ್ಟೆ ಕೈಚೀಲ ಹೊಲೆದು ಮಾರುಕಟ್ಟೆಗೆ ಹೋಗಿ ಮಾರಿ, ಬಂದಂತಹ ರೊಕ್ಕದಲ್ಲಿ ದೊಡ್ಡ ಕುಟುಂಬವನ್ನು ಸಾಕುವುದು ಎಷ್ಟು ಕಷ್ಟ ಎನ್ನುವ ನೋವಿನ ಚಿತ್ರಣಗಳು ಅನಾವರಣಗೊಂಡಿವೆ.  ಅಲ್ಲದೆ, ತಂದೆ ವ್ಯಾಪಾರಕ್ಕಾಗಿ ಪೇಟೆಗೆ ಎರಡು ಮೂರು ದಿನ ಹೋದಂತಹ ಸಂದರ್ಭದಲ್ಲಿ ‘ಅವ್ವ’ ಕೂಲಿ ಮಾಡಿ ಬಂದು ತಂತಹ ರೊಕ್ಕದಲ್ಲಿ ರೊಟ್ಟಿ ಸುಟ್ಟು ತಿನ್ನಿಸುವುದು, ಅವ್ವನಿಗೆ ಕೂಲಿ ಸಿಗದೇ ಇದ್ದಂತಹ ಸಂದರ್ಭದಲ್ಲಿ ಉಪವಾಸ ಮಲಗಿದ್ದು ಸೇರಿದಂತೆ ಅನೇಕ ಕಥೆಗಳು ನಿಜಕ್ಕೂ ಕಣ್ಣಂಚಿಗೆ ನೀರು ತರಿಸುತ್ತವೆ ಎಂದರು. 

ಪ್ರಾಸ್ತವಿಕ ನುಡಿಗಳನ್ನಾಡಿದ ಲೇಖಕಿ ಸುಧಾ ಚಿದಾನಂದಗೌಡ, ಒಬ್ಬ ಲೇಖಕ ತನ್ನೊಳಗಿನ ಭಾವನೆಗಳನ್ನು, ಅಕ್ಷರ ರೂಪಕ್ಕೆ ತಂದು, ಪುಸ್ತಕ ಪ್ರಕಟಿಸುವುದು ಹೆರಿಗೆಯಾದಷ್ಟೇ ಕಷ್ಟದ ಸಂಗತಿ.  ಇನ್ನು ಆ ಮಗು ಎಲ್ಲರ ಆಕರ್ಷಣೆಗೆ ಒಳಗಾದಾಗ ತಾಯಿಗೆ ಆಗುವ ಸಂತೋಷದಂತೆ ಲೇಖಕನಿಗೂ ಆಗುತ್ತದೆ.  ಈ ಕಾರಣಕ್ಕಾಗಿಯೇ ಸಂವಾದಗಳು ನಡೆಯಬೇಕು. ಆ ಪುಸ್ತಕವನ್ನು ಪರಾಮರ್ಶಿಸಬೇಕು. ಅದರ ಗುಣಾವಗುಣಗಳನ್ನು ಚರ್ಚಿಸಬೇಕು. ಆಗ ಬರವಣಿಗೆಯ ರೂಪು-ರೇಷೆಗಳು ಮೌಲ್ಯ ಹೊಂದುತ್ತವೆ ಅಥವಾ ಗಟ್ಟಿತನ ಹೊಂದುತ್ತವೆ ಎಂದು ಅಭಿಪ್ರಾಯಪಟ್ಟರು. 

ಬಂಡಾಯ ಸಾಹಿತ್ಯ ಸಂಘಟನೆಯ ಅಬ್ದುಲ್ ಹೈ, ಪಿ.ಆರ್‌.ವೆಂಕಟೇಶ್, ಉಪನ್ಯಾಸಕ ಹೆಚ್‌.ಎಂ. ನಿರಂಜನ, ಶಿಕ್ಷಕಿ ಟಿ.ಎಂ. ಉಷಾರಾಣಿ, ಲೇಖಕಿ ಭಾರತಿ ಮೂಲಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಹಿರಿಯ ಉಪನ್ಯಾಸಕ ಮೃತ್ಯುಂಜಯ ರುಮಾಲೆ, .ಹೆಚ್‌.ಎಂ.ಚಂದ್ರಶೇಖರ ಶಾಸ್ತ್ರಿ, ಹೆಚ್‌.ಸೌಭಾಗ್ಯಲಕ್ಷ್ಮಿ, ನಿವೃತ್ತ ವೈದ್ಯಾಧಿಕಾರಿ ಡಾ. ಎಸ್‌.ಡಿ.ಸುಲೋಚನ, ಶರಣ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು, ಸ್ಪೂರ್ತಿ ವೇದಿಕೆ, ಚೇತನ ಸಾಹಿತ್ಯ ಸಂಸ್ಥೆ, ಚುಟುಕು ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ವೇದಿಕೆ, ಜನಪದ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.