ಡಾ. ಬಿ.ಆರ್‌. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳ ಪ್ರಾರಂಭೋತ್ಸವ ಕಾರ್ಯಕ್ರಮ

ಡಾ. ಬಿ.ಆರ್‌. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳ ಪ್ರಾರಂಭೋತ್ಸವ ಕಾರ್ಯಕ್ರಮ Dr. B.R. Ambedkar Pre-Matric Boys' Hostel Inauguration Ceremony

ಮುದ್ದೇಬಿಹಾಳ 31 : ಪ್ರತಿ ಮನೆಯಲ್ಲೂ ಮನುಷ್ಯರು ಸಿಗುತ್ತಾರೆ, ಆದರೆ ಮನುಷ್ಯತ್ವ ಸಿಗುವುದು ಅಪರೂಪ. ವಸತಿ ನಿಲಯಗಳ ಅಡುಗೆ ಹಾಗೂ ಇತರೆ ಸಿಬ್ಬಂದಿಗಳು ಸಮಯ ಪ್ರಜ್ಞೆ ರೂಢಿಸಿಕೊಂಡು, ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರಲ್ಲಿ ಸಂಸ್ಕಾರ ಬೆಳೆಸುವ ಕೆಲಸ ಮಾಡಬೇಕು ಎಂದು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೊದ್ದಾರ್ ಹೇಳಿದರು.

ಪಟ್ಟಣದ  ನಗರದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ವಿದ್ಯಾರ್ಥಿ ನಿಲಯಗಳ ಪ್ರಾರಂಭೋತ್ಸವ, ನಿಲಯಗಳ ಸಮರ​‍್ಕ ನಿರ್ವಹಣೆ ಕುರಿತು ನಿಲಯ ಪಾಲಕರು ಹಾಗೂ ಗ್ರೂಪ್‌-ಡಿ ಸಿಬ್ಬಂದಿಗಳ ಪುನಶ್ಚೇತನ ಕಾರ್ಯಾಗಾರ ಮತ್ತು ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಅಡುಗೆ ಸಿಬ್ಬಂದಿಗಳ ಸಹಕಾರ ಮತ್ತು ಅವರ ಕೈರುಚಿ ಅತ್ಯಂತ ಮುಖ್ಯ. ವಸತಿ ನಿಲಯದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.  

ಯಾವುದೇ ಕೆಲಸ ಮಾಡುವ ಮುನ್ನ ನಮ್ಮನ್ನು ನಾವು ಪ್ರೀತಿಸಬೇಕು, ಆ ಬಳಿಕವಷ್ಟೇ ಇತರರನ್ನು ಪ್ರೀತಿಸಲು ಸಾಧ್ಯ. ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಶೀಘ್ರದಲ್ಲೇ ಅಡುಗೆ ಸಿಬ್ಬಂದಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ) ವಿತರಿಸಲಾಗುವುದು. ಸಿಬ್ಬಂದಿಗಳು ಸಮವಸ್ತ್ರ ಧರಿಸಿ ನಿಲಯಕ್ಕೆ ಬರಬೇಕು. ನಿಮ್ಮ ವೇತನದ ಸಮಸ್ಯೆಗಳನ್ನು ಸರ್ಕಾರದ ಸುತ್ತೋಲೆಯ ಪ್ರಕಾರ ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.ಮಕ್ಕಳನ್ನು ದೇವರೆಂದು ಭಾವಿಸಿ ಕೆಲಸ ಮಾಡಿ:ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್‌-2 ಸಹಾಯಕ ನಿರ್ದೇಶಕಿ ಬಸಂತಿ ಮಠ ಮಾತನಾಡಿ, "ಪ್ರತಿ ವರ್ಷದಂತೆ ಈ ವರ್ಷವೂ ಸಿಬ್ಬಂದಿ ಎದುರಿಸುತ್ತಿರುವ ಇಎಸ್‌ಐ ಮತ್ತು ಪಿಎಫ್ ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು.

ಮಕ್ಕಳಿಗೆ ಪ್ರೀತಿಯಿಂದ ಒಳ್ಳೆಯ ಆಹಾರ ಸಿದ್ಧಪಡಿಸಿ ನೀಡಿದರೆ, ಮಕ್ಕಳಲ್ಲಿ ಸಿಬ್ಬಂದಿಗಳ ಮೇಲಿನ ಗೌರವ ಮತ್ತು ವಿಶ್ವಾಸ ಹೆಚ್ಚುತ್ತದೆ. ಮಕ್ಕಳನ್ನು ದೇವರೆಂದು ಭಾವಿಸಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ" ಎಂದು ತಿಳಿಸಿದರು.ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳ ಮನವಿ: ಇದೇ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಬಿಸಿಎಂ ವಸತಿ ನಿಲಯಗಳ ಸಿಬ್ಬಂದಿಗೆ ಹೋಲಿಸಿದರೆ ಸಮಾಜ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿಗಳ ವೇತನ ಕಡಿಮೆ ಇದ್ದು, ಅದನ್ನು ಹೆಚ್ಚಿಸಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ನೀಡಬೇಕು ಮತ್ತು ವೇತನದ ಸ್ಲಿಪ್ ಒದಗಿಸಬೇಕು.

ವರ್ಷಕ್ಕೆ ಎರಡು ಸಲ ಇಲಾಖೆ ವತಿಯಿಂದ ಹಾಗೂ ಹೊರಗುತ್ತಿಗೆದಾರರ ಸಭೆ ನಡೆಸಬೇಕು. ಐಡಿ ಕಾರ್ಡ್‌ ವಿತರಿಸಬೇಕು ಹಾಗೂ ವಾರಕ್ಕೊಂದು ದಿನ ಕಡ್ಡಾಯ ರಜೆ ನೀಡಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ, ಕನಿಷ್ಠ ವೇತನ ಕಾಯ್ದೆ ಜಾರಿಗೆ ತರಬೇಕು. ಅಡುಗೆ ಸಿಬ್ಬಂದಿಗಳು ವಸತಿ ನಿಲಯದ ಸ್ವಚ್ಛತೆ ಕಾಪಾಡಿ ಅಧಿಕಾರಿಗಳಿಗೆ ಹಾಗೂ ವಾರ್ಡನ್ಗಳಿಗೆ ಗೌರವ ನೀಡಬೇಕು ಎಂದರು.ಜಿಲ್ಲೆಗೆ ದ್ವಿತೀಯ ಸ್ಥಾನದ ಗರಿ:ಇದೇ ಸಂದರ್ಭದಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡ ಸಾಧನೆಯನ್ನು ಸಭೆಯಲ್ಲಿ ಶ್ಲಾಘಿಸಲಾಯಿತು.

ಈ ಸಂದರ್ಭದಲ್ಲಿ  ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಶಿವಲಿಂಗಪ್ಪ ಹಚಡದ, ಎಪ್ ಡಿಸಿಎಸ್ ಕೆ ಲಮಾಣಿ, ವಸತಿ ನಿಲಯದ ಮೇಲ್ವಿಚಾರಕರಾದ ಸಂಗಮೇಶ ವಾಲಿಕಾರ, ಎಸ್ ಎನ್‌.ಮಲ್ಲಾಡಿ ಶ್ರೀಕಾಂತ ಸಲಗಾರ ಎಸ್‌. ಎಮ್ ಕಲಬುರ್ಗಿ, ಎನ್‌. ವ್ಹಿ ಕೋರಿ ಎಸ್ ಎಮ್ ಬಾಸಗಿ,  ನಾಗರಾಜ ಗುಡಗುಂಟಿ,  ಮಹಾಂತೇಶ ತಾಳಿಕೋಟೆ, ರೇಣುಕಾ ಪಾಟೀಲ, ಸಾವಿತ್ರಿ  ಬಿರಾದಾರ, ವಾಣಿ ಹನಗುಂಡ, ಸೇರಿದಂತೆ ತಾಲ್ಲೂಕಿನ ವಿವಿಧ ವಸತಿ ನಿಲಯಗಳ ಅಡುಗೆ ಸಿಬ್ಬಂದಿಗಳು  ಸೇರಿದಂತೆ ಸಮಾಜ  ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.