ಡಾ. ಅಂಬೇಡ್ಕರ ಅವರ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಪ್ರಸ್ತುತವಾಗಿವೆ: ಎಂ.ಬಿ. ಪಾಟೀಲ

Dr. Ambedkar's philosophies are relevant to the entire world: M.B. Patil

ಡಾ. ಅಂಬೇಡ್ಕರ ಅವರ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಪ್ರಸ್ತುತವಾಗಿವೆ: ಎಂ.ಬಿ. ಪಾಟೀಲ 

ವಿಜಯಪುರ, 14 :  ಡಾ. ಬಿ. ಆರ್‌. ಅಂಬೇಡ್ಕರ ಅವರ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಪ್ರಸ್ತುತವಾಗಿವೆ ಎಂದು ಕೈಗಾರಿಕೆ, ಮೂಲಸಭೌಲಭ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. 

ಇಂದು ಸೋಮವಾರ ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್, ಜಾಗೃತ ಕರ್ನಾಟಕ, ಅನೌಪಚಾರಿಕೆ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಡಾ. ಬಿ. ಆರ್‌. ಅಂಬೇಡ್ಕರ್ ಹಬ್ಬದ ಅಂಗವಾಗಿ ನಡೆದ ಅಂಬೇಡ್ಕರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕಾಯಕಯೋಗಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಸ್ಪಷ್ಟವಾದ ಸಾಮ್ಯತೆಗಳಿವೆ. ಇಬ್ಬರೂ ಸಮಾಜದಲ್ಲಿ ಸಮಾನತೆಗಾಗಿ ಬದ್ಧರಾಗಿ, ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದಾರೆ.  ಈ ಮಹನೀಯರು ಬೋಧಿಸಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಈ ಹಿನ್ನೆಲೆಯಲ್ಲಿ ‘ಬಸವಭಾರತ ಮತ್ತು ಅಂಬೇಡ್ಕರ್ ಭಾರತ ಎಂಬ ಸಮಾನತೆಯ ಆಧಾರಿತ ಸಮಾಜ ನಿರ್ಮಾಣ ಅವಶ್ಯವಿದೆ ಎಂದು ಅವರು ಹೇಳಿದರು. 

ಡಾ. ಬಿ. ಆರ್‌. ಅಂಬೇಡ್ಕರ್ ಹಬ್ಬವನ್ನು ಆಯೋಜಿಸುವ ಮೂಲಕ ಶ್ರೀನಾಥ ಪೂಜಾರಿ ಮತ್ತು ತಂಡದವರು ಅತ್ಯುತ್ತಮ ಕಾರ್ಯ ಮಾಡಿದ್ದಾರೆ.  ಮುಂಬರುವ ದಿನಗಳಲ್ಲಿ ಅನುಭವ ಮಂಟಪದ ಮಾದರಿಯಲ್ಲಿ ಈ ಹಬ್ಬ ಮುಂದುವರೆಯಬೇಕು.  ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಅವರು ಹೇಳಿದರು.   

ಸಂವಿಧಾನ ಭಾರತದ ಹೃದಯವಿದ್ದಂತೆ.  ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಮನುಸ್ಮೃತಿ ಮರಳಿ ತರುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಸಚಿವರು ಹೇಳಿದರು. 

ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಸಾಮಾಜಿಕ ನ್ಯಾಯ ಪರಿಕಲ್ಪನೆಯಡಿ ಕೆಲಸ ಮಾಡುವ ಡಿಸಿ, ಎಸ್ಪಿ, ಸಿಇಓ ಅಧಿಕಾರಿಗಳನ್ನು ಜಿಲ್ಲೆಗೆ ತಂ?????ರೆ.  ಈ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.  ಡಾ. ಬಿ. ಆರ್‌. ಅಂಬೇಡ್ಕರ್ ಹಬ್ಬ ಮಾಜಮುಖಿ ಚಿಂತನಗಳನ್ನು ಮಂಥನ ಮಾಡಲು ಸಹಕಾರಿಯಾಗಿದೆ.  ಅಂಬೇಡ್ಕರ ಚಿಂತನೆಗಳ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದು ಹೇಳಿದರು. 

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಉತ್ಕೃಷ್ಟ ಸಂವಿಧಾನ ನೀಡುವ ಮೂಲಕ ದೇಶದಲ್ಲಿ ಸರ್ವಜನರ ಸಬಲೀಕರಣಕ್ಕೆ ಶ್ರಮಿಸಿದ್ದಾರೆ.  ಇತರ ದೇಶಗಳಿಗೆ ಮಾದರಿಯಾದ ಸಂವಿಧಾನ ನೀಡಿದ್ದಾರೆ.   ಸಚಿವ ಎಂ. ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಅಂಬೇಡ್ಕರ್ ತತ್ವಾದರ್ಶಗಳಡಿ ಕೈಗೊಂಡ ನೀರಾವರಿ ಯೋಜನೆಗಳ ಮೂಲಕ ಎಲ್ಲರ ಅಭ್ಯುದಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 

ಇದೇ ವೇಳೆ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಸಚಿವರು ಪ್ರಶಸ್ತಿ ಪ್ರಧಾನ ಮಾಡಿದರು. 

ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಳ್ಕರ, ಮುಖಂಡರಾದ ಚನ್ನು ಕಟ್ಟಿಮನಿ, ಸೋಮನಾಥ ಕಳ್ಳಿಮನಿ, ಸಂಜೀವ ಕಂಬಾಗಿ, ಶಿಳ್ಳಿನ, ಆರತಿ ಶಹಾಪುರ, ಅಡಿವೆಪ್ಪ ಸಾಲಗಲ, ಸುನೀತಾ, ರೇಣುಕಾ, ಅಕ್ಷಯಕುಮಾರ, ಬಸವರಾಜ ಮುಂತಾದವರು ಉಪಸ್ಥಿತರಿದ್ದರು.