ಮಾದರಿ ನೀತಿ ಸಂಹಿತೆ ಉಲ್ಲಂಘಿಸಬೇಡಿ: ಚುನಾವಣಾ ವೀಕ್ಷಕರಿಂದ ರಾಜೀವ್ ರತನ್

ಕಾರವಾರ 22: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದಂತೆ ಚುನಾವಣಾ ಪ್ರಚಾರ ಕೈಗೊಳ್ಳುವಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ತಿಳಿಸಿದರು. 

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ರಾಜಕೀಯ ಪಕ್ಷಗಳು ಮತ್ತು ಅಂತಿಮ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ನಡೆದ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ  ಚುನಾವಣೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪಾಲಿಸುವಂತೆ ತಿಳಿಸಿದ ಅವರು, ಚುನಾವಣಾ ಆಯೋಗವು ಪ್ರತಿಯೊಬ್ಬ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾನ ಅವಕಾಶಗಳನ್ನು ನೀಡಿದ್ದು, ಈ ಕುರಿತಂತೆ ಯಾವುದೇ ದೂರುಗಳಿದ್ದಲ್ಲಿ ನೇರವಾಗಿ ತಮಗೆ ಸಲ್ಲಿಸುವಂತೆ  ತಿಳಿಸಿದರು. 

ಯಾವುದೇ ಚುನಾವಣಾ ಪ್ರಚಾರ ಸಭೆಗಳು, ಕಾರ್ಯಕ್ರಮಗಳು, ರಾ​‍್ಯಲಿಗಳನ್ನು ನಡೆಸುವ ಪೂರ್ವದಲ್ಲಿ ಸೂಕ್ತ ಅನುಮತಿಯನ್ನು ಪಡೆದು ಕಾರ್ಯಕ್ರಮ ಆಯೋಜಿಸಿ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕೋರುವ ಎಲ್ಲಾ ಅನುಮತಿಗಳನ್ನು ನಿಗಧಿತ ಅವಧಿಯಲ್ಲಿ ನೀಡಲಾಗುವುದು ಎಂದರು. 

ಧಾರ್ಮಿಕ ಸ್ಥಳಗಳು, ಶಾಲಾ ಆವರಣಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಬೇಡಿ, ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸಿಕೊಳ್ಳಬೇಡಿ, ಚುನಾವಣಾ ಆಯೋಗವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ತಮಗೆ ತಿಳಿಸಲಾಗುವುದು ಆ ನಿರ್ದೇಶನಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದರು. 

 ಚುನಾವಣಾ ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್ ಮಾತನಾಡಿ, ಚುನಾವಣಾ ಆಯೋಗ ಸೂಚಿಸಿರುವ ವೆಚ್ಚದ ಮಿತಿಯಲ್ಲಿಯೇ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹಾಗೂ ಕಾಲ ಕಾಲಕ್ಕೆ ವೆಚ್ಚ ವೀಕ್ಷಕರ ಕಚೇರಿಯನ್ನು ಸಂಪರ್ಕಿಸಿ ತಮ್ಮ ಲೆಕ್ಕಗಳ ಬಗ್ಗೆ ಪರೀಶೀಲನೆ ಮಾಡಿಕೊಳ್ಳುವಂತೆ ತಿಳಿಸಿದರು. 

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ,  ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು  ತಮ್ಮ ಯಾವುದೇ ದೂರುಗಳನ್ನು ನೇರವಾಗಿ ಅಥವಾ ಸೀ ವಿಜಿಲ್ ಮೂಲಕ ಹಾಗೂ ಉಚಿತ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ತಿಳಿಸಬಹುದಾಗಿದ್ದು, ದೂರುಗಳಿಗೆ ತಕ್ಷಣದಲ್ಲಿ ಸ್ಪಂದಿಸುವುದಾಗಿ ಹಾಗೂ ಎಲ್ಲಾ ರೀತಿಯ ಅನುಮತಿಗಳನ್ನು ನಿಗಧಿತ ಅವಧಿಯೊಳಗೆ ನೀಡಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ಕೇಬಲ್ ಟಿವಿಗಳಲ್ಲಿ ಜಾಹೀರಾತು ನೀಡುವ ಕುರಿತಂತೆ ಅನುಮತಿ ಕೋರಿ ಎಂಸಿಎಂಸಿ ಗೆ ಮಧ್ಯಾಹ್ನ 1 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅದೇ ದಿನ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.  

ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಉಪಸ್ಥಿತರಿದ್ದರು.