ಲೋಕದರ್ಶನ ವರದಿ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರೀಶೀಲನಾ ಸಭೆ ಮುಂಬರುವ ದಿನಗಳಲ್ಲಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮ್ಮೇಳನ - ರೆಡ್ಡಿ ಶ್ರೀನಿವಾಸ
ಕೊಪ್ಪಳ 29: ಮುಂಬರುವ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದ ಎಂದು ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಮಹತ್ತರವಾದ ಐದು ಗ್ಯಾರಂಟಿ ಯೋಜನೆಗಳು ಬಡ, ಹಿಂದುಳಿದ ವರ್ಗಗಳ ಹಾಗೂ ಜನ ಸಾಮಾನ್ಯರ ಬಧುಕಿಗೆ ಆಸರೆಯಾಗಿವೆ. ಈ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದೆ. ಐದು ಗ್ಯಾರಂಟಿ ಯೋಜನೆಗಳಡಿ ಲಾಭ ಪಡೆದ ಅರ್ಹ ಫಲಾನುಭವಿಗಳೊಂದಿಗೆ ಹೋಬಳಿ ಮಟ್ಟದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಯೋಜನೆಗಳಡಿ ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಈ ಯೋಜನೆಗಳ ಸಮರ್ಕ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ್ ಸಭೆಗಳಲಿಯೂ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಬೇಕು. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗುವ ಸಮಸ್ಯೆಗಳನ್ನು ಸ್ಥಳೀಯ ಹಂತದಲ್ಲಿಯೇ ಪರಿಹರಿಸಲು ಅನುಕೂಲವಾಗುತ್ತದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಡಿ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಹೊರಗುಳಿಯದಂತೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಬದುಕು ಕಟ್ಟಿಕೊಂಡು, ಇತರರಿಗೆ ಮಾದರಿಯಾದ ಫಲಾನುಭವಿಗಳ ಯಶೋಗಾಥೆಗಳ ಮಾಹಿತಿಯನ್ನು ಸಂಗ್ರಹಿಸಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡಲೇ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಐದು ಗ್ಯಾರಂಟಿ ಯೋಜನೆಗಳ ಪ್ರಗತಿ: ಗೃಹಲಕ್ಷ್ಮೀ ಯೋಜನೆಯಡಿ ಕೊಪ್ಪಳ ಜಿಲ್ಲೆಯ 3,24,354 ಫಲಾನುಭವಿಗಳಿಗೆ ಜನವರಿ-2025ರ ಅಂತ್ಯದವರೆಗೆ ಡಿಬಿಟಿ ಮೂಲಕ 1093.09 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಮಾರ್ಚ್-2025ರ ಅಂತ್ಯದವರೆಗೆ 2,77,414 ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದ್ದು, ಇದಕ್ಕಾಗಿ 231.35 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಿಗೆ ಡಿಸೆಂಬರ್-2024ರ ಅಂತ್ಯದವರೆಗೆ 2,99,213 ಕಾರ್ಡುದಾರರಿಗೆ 18.39 ಕೋಟಿ ರೂ.ಗಳ ವೆಚ್ಚ ಭರಿಸಲಾಗಿರುತ್ತದೆ. 2025ರ ಫೆಬ್ರವರಿ ಮಾಹೆಯಿಂದ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಶಕ್ತಿಯೋಜನೆಯಡಿ ಮಾರ್ಚ್-2025ರ ಅಂತ್ಯದವರೆಗೆ 7 ಕೋಟಿ 2 ಲಕ್ಷದ 25 ಸಾವಿರ 246 ಮಹಿಳೆಯರು ಕಲ್ಯಾಣ ಕರ್ನಾಟ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ 248.09 ಕೋಟಿ ರೂ.ಗಳ ಖರ್ಚಾಗಿದೆ. ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ (ಏಪ್ರಿಲ್-2025) 8633 ನೋಂದಣಿಯಾಗಿದ್ದು, ಒಟ್ಟು ಮೊತ್ತ ರೂ. 10.05 ಕೋಟಿಗಳನ್ನು ಪಾವತಿಸಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೋಂಡಬಾಳ, ಖಾಸಿಂಸಾಬ ಮರ್ದಾನಸಾಬ, ನಾಗರಾಜ್ ಅರಳಿ, ಅಮರೇಶ ಎಸ್.ಜಿ., ಗ್ಯಾರಂಟಿ ಯೋಜನೆಗಳ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೇರಿದಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.