ವಿಶೇಷಚೇತನ-ಹಿರಿಯ ನಾಗರೀಕರಿಗೆ ಉಚಿತ ಸಾಧನ-ಸಲಕರಣೆ ವಿತರಣೆ

Distribution of free aids and equipment to the specially-abled and senior citizens

ವಿಜಯಪುರ 29: ವಿಶೇಷಚೇತನರು ಕೂಡ ಸಾಮಾನ್ಯರಂತೆ ಬದುಕುವ ಬಯಕೆಯಿರುತ್ತದೆ ಎಂಬುದನ್ನು ಸಮಾಜದ ಇತರರು ಅರಿತು ಅವರ ಬೆಳವಣಿಗೆಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷಚೇತನರ ಸಬಲೀಕರಣಕ್ಕಾಗಿ ಉಚಿತವಾಗಿ ಸಾಧನ ಸಲಕರಣೆಯನ್ನು ನೀಡಲಾಗುತ್ತಿದೆ ಎಂದು ಸಂಸದರಾದ ರಮೇಶ ಜಿಗಜಿಣಗಿ ಹೇಳಿದರು.  

ಮಂಗಳವಾರ ನಗರದ ಕಂದಗಲ್ ಹನುಮಂತರಾಯ್ ರಂಗ ಮಂದಿರದಲ್ಲಿ ಮಂಗಳವಾರ ಭಾರತ ಸರ್ಕಾರ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ, ಅಲಿಂಕೋ, ಜಿಲ್ಲಾಡಳಿತ, ಜಿಲ್ಲಾಪಂಚಾಯತಗಳ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸುವ ಭಾರತ ಸರ್ಕಾರದ ಅಡಿಪ್ ಯೋಜನೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಸಾಮಾಜಿಕ ಅಧಿಕಾರಿತ ಶಿವಿರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿಶೇಷಚೇತನರಿಗಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು ತಾವುಗಳು ಮಾತ್ರ ಸಮರ​‍್ಕವಾಗಿ ಉಪಯೋಗಿಸುವಂತಾಗಬೇಕು ಅಧಿಕಾರಿಗಳು ಕೂಡ ಅರ್ಹತೆ ಹೊಂದಿದವರಿಗೆ ಮಾತ್ರ ಸಾಧನ ಸಲಕರಣಗಳು ದೊರೆಯುವಂತೆ ಕ್ರಮ ವಹಿಸಬೇಕು ಯೋಜನೆಗಳ ಫಲಾನುಭವಿಗಳು ಸಾಧನ ಸಲಕರಣೆಗಳನ್ನು ಸದುಪಯೋಗ ಪಡೆದುಕೊಂಡು ಮುಖ್ಯ ವಾಹಿನಿಗೆ ಬರುವಂತೆ ಕಿವಿಮಾತು ಹೇಳಿದರು.  

ಜಿಲ್ಲಾಧಿಕಾರಿ ಟಿ.ಭೂಬಾಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ವಿಶೇಷ ಚೇತನರಿಗೆ ಇರುವ ಸಮಸ್ಯೆಗಳನ್ನು ಗುರುತಿಸಿ ಅಗತ್ಯವಾದ ಸಾಧನ ಸಲಕರಣೆಗಳನ್ನು ನೀಡಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಯೋಜನೆಗಳು ಫಲಾನುಭವಿಗಳಿಗೆ ಸಹಕಾರಿಯಾಗಿವೆ. ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಬಡ ವಿಶೇಷಚೇತನ ಮಕ್ಕಳಿಗಾಗಿ ವಿಶೇಷ ಶಾಲೆ ನಿರ್ಮಾಣ ಹಂತದಲ್ಲಿದ್ದು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ. ಇಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುವುದು ಜಿಲ್ಲೆಯಲ್ಲಿರುವ ವಿಶೇಷ ಚೇತನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.  

ವಿಶೇಷಚೇತನರ ಇಲಾಖೆಯ ಸಹಾಯಕ ನಿರ್ದೇಶಕ ಸವಿತಾ ಕಾಳೆ ಮಾತನಾಡಿ ವಿಜಯಪುರ ಹಾಗೂ ಬಸವನ ಬಾಗೇವಾಡಿ ತಾಲೂಕಿನ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ  ಅರ್ಹ ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.  

ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ ಚವ್ಹಾಣ, ಅಲಿಂಕೋ ಡೆಪ್ಯೂಟಿ ಮ್ಯಾನೇಜರ ಶಿವುಕುಮಾರ, ವಿಶೇಷ ಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸಂಸ್ಥೆಗಳು, ಪಾಲಕ ಪೋಷಕರ ಒಕ್ಕೂಟದ ಪದಾದಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.