ಜನೀವಾರಕ್ಕೆ ಅಪಚಾರ: ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ
ಅಥಣಿ 19: ಎಪ್ರಿಲ್ 17 ರಂದು ನಡೆದ ಸಿ.ಇ.ಟಿ ಪರೀಕ್ಷೆ ಸಮಯದಲ್ಲಿ ಜನೀವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಅಥಣಿಯ ಜನವಾರಧಾರಿಗಳು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಅಥಣಿ ಘಟಕ, ಜೈನ್ ದಿಗಂಬರ ಸಮಾಜ ಸಂಘಟನೆ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆ, ಮರಾಠಾ ಕ್ಷತ್ರೀಯ ಸಮಾಜ ಸಂಘಟನೆ, ಗುಜರಾತಿ ಬ್ರಾಹ್ಮಣ ಸಮಾಜ ಸಂಘಟನೆ, ಆರ್ಯ ವೈಶ್ಯ ಸಮಾಜ, ಸವೀತಾ ಸಮಾಜ ಸಂಘಟನೆಯ ನೂರಾರು ಜನ ಬೈಕ್ ರ್ಯಾಲಿ ಮೂಲಕ ತೆರಳಿ ತಹಶೀಲ್ದಾರ ಸಿದರಾಯ ಭೋಸಗಿ ಇವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಬೀದರ ಮತ್ತು ಶಿವಮುಗ್ಗಾ ಜಿಲ್ಲೆಯ ತೀರ್ಥಹಳ್ಳಿಯ ಸಿ.ಇ.ಟಿ ಪರೀಕ್ಷಾ ಕೇಂದ್ರಗಳಲ್ಲಿ ಕೆ.ಇ.ಎ ನಿರ್ದೇಶನ ಇಲ್ಲದಿದ್ದರೂ ಕೂಡ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದಾರೆ ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
ಸಂವಿಧಾನದ ಅನುಚ್ಛೇದ 25 ರಲ್ಲಿ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗನಗುಣವಾಗಿ ಲಾಂಛನ ಮತ್ತು ಜನೀವಾರ, ಶಿವಧಾರಗಳನ್ನು ಧರಿಸಲು ಅವಕಾಶ ಇದೆ ಆದರೆ ಇಲ್ಲಿ ಮಾತ್ರ ದುರುದ್ದೇಶದಿಂದ ಜನಿವಾರ ತೆಗೆಸಿರುವುದು ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದ್ದು, ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಮತ್ತು ಮೇಲಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜನಿವಾರ ತೆಗೆಯಲು ಒಪ್ಪದ ಪರೀಕ್ಷಾರ್ಥಿ ಬೀದರನ ಸುಚೀವೃತ ಕುಲಕರ್ಣಿ ಸಿ.ಇ.ಟಿ ಪರೀಕ್ಷೆಯಿಂದ ವಂಚಿತಗೊಂಡಿದ್ದು, ಆ ವಿದ್ಯಾರ್ಥಿಗೆ ಸರಕಾರ ನ್ಯಾಯ ಒದಗಿಸುವ ಮೂಲಕ ಧೈರ್ಯ ತುಂಬಬೇಕುಮತ್ತು ಮುಂದಿನ ಯಾವುದೇ ಪರೀಕ್ಷೆಯಲ್ಲಿಯೂ ಈ ರೀತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರಾರಂಭದಲ್ಲಿ ಜನವಾರಧಾರಿ ಸಮಾಜ ಬಾಂಧವರು ಸ್ಥಳೀಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಮಾವೇಶಗೊಂಡು ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಹೊರಟು ಶ್ರೀ ಬಸವೇಶ್ವರ ವೃತ್ತ, ಶಿವಯೋಗಿ ಮತ್ತು ಡಾ.ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನ ಸೌಧ ತಲುಪಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಬ್ರಾಹ್ಮಣ ಸಮಾಜದ ನ್ಯಾಯವಾದಿ ಆರ್.ಎನ್.ಸಿದ್ಧಾಂತಿ, ಧುರೀಣರಾದ ಉಮೇಶರಾವ ಬಂಟೋಡಕರ, ಅರವಿಂದ ದೇಶಪಾಂಡೆ, ಪಂ.ಬಿಂದುಮಾಧವ ಜೋಶಿ, ಶ್ರೀನಿವಾಸ ಜೋಶಿ, ಜೈನ್ ಸಮಾಜದ ಅರುಣ ಯಲಗುದ್ರಿ, ವಿಶ್ವಕರ್ಮ ಸಮಾಜದ ಭೀಮರಾವ ಬಡಿಗೇರ, ಮರಾಠಾ ಸಮಾಜದ ರವಿ ದೇಸಾಯಿ, ವೈಶ್ಯ ಸಮಾಜದ ಉದಯ ಗುಂಡಾ, ಗುಜರಾತಿ ಸನಾಜದ ಭರತ ಸೋಮಯ್ಯ ಮಾತನಾಡಿದರು. ರಘೋತ್ತಮ ಕಟ್ಟಿ ಮನವಿ ಓದಿದರು.
ಪ್ರತಿಭಟನೆಯಲ್ಲಿ ಶ್ರೀರಾಮ ಕಟ್ಟಿ, ಅನೀಲ ದೇಶಪಾಂಡೆ (ಹಿಡಕಲ್), ಎನ್.ಕೆ.ಪಾಟೀಲ, ಗುಂಡು ಇಜಾರೆ, ಭರಮು ಬಡಿಗೇರ, ಅವಿನಾಶ ಜಾಧವ, ಸೌರಭ ಮಾಶಾಳ, ರಾಜು ಪಾಟೀಲ, ಭಾವೀನ್ ಸೋಮಯ್ಯ, ಲಕ್ಷ್ಮಣ ರಾಮದಾಸಿ, ವೆಂಕಟೇಶ ದೇಶಪಾಂಡೆ, ಮಾಧವ ಕೌಲಗುಡ್ಡ, ಸುಧೀಂದ್ರ ಬಾದರಾಯಣಿ, ಚೈತನ್ಯ ಮಳಗೀಕರ, ಆದೀಪ ಮಾಶಾಳ, ಸಚೀನ್ ಕುಲಕರ್ಣಿ, ರಾಜು ಕಪೂರಶೆಟ್ಟಿ ಸೇರಿದಂತೆ ನೂರಾರು ಜನ ಭಾಗವಹಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.