ವಿಜಯಪುರ 13: ರೈತರ ಜಮೀನಿನ ಬಂಡಿದಾರಿ, ಕಾಲದಾರಿಯ ಕುರಿತು ಉತಾರೆಯ ನಕಾಶೆಯಲ್ಲಿ ಕಡ್ಡಾಯವಾಗಿ ಇನ್ನುಮುಂದೆ ದಾರಿ ತೋರಿಸುವುದು ಹಾಗೂ ಯಾವುದೇ ರೈತರು ವಹಿವಾಟು ದಾರಿಯಲ್ಲಿ ಅಡತಡೆ ಉಂಟು ಮಾಡಿದರೆ ಜಿಲ್ಲಾಧಿಕಾರಿ ಮತ್ತು ತಹಶಿಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಿ ಶಾಶ್ವತ ದಾರಿ ಮಾಡಿಕೊಡುವಂತೆ ಆದೇಶ ಹೊರಡಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಜಿಲ್ಲೆಯ ರೈತರ ಜಮೀನುಗಳ ದಾರಿಯ ಸಮಸ್ಯ ಕುರಿತು ಪ್ರತಿನಿತ್ಯ ಹಲವಾರು ವ್ಯಾಜ್ಯಗಳು ಬರುತ್ತಿದ್ದು, ಇದರಿಂದ ರೈತರು ಕೃಷಿ ಚಟುವಟಿಕೆಗೆ ದಾರಿ ಇಲ್ಲದೇ ಕೋರ್ಟ ಕಚೇರಿ ಅಂತ ಅಲೆದಾಡುವಂತಾಗಿದೆ, ಪ್ರತಿನಿತ್ಯ ಜಗಳಗಳಾಗಿ ಕೊಲೆಯಲ್ಲಿ ಅಂತ್ಯಗೊಳ್ಳುತ್ತಿವೆ, ಇದಕ್ಕೊಂದು ಶಾಶ್ವತ ಪರಿಹಾರವನ್ನು ತಾವುಗಳು ಎಲ್ಲಾ ರೈತರಿಗೆ ನಕಾಶೆಯಲ್ಲಿ ದಾರಿ ನಮೂದಿಸುವಂತೆ ಆದೇಶ ಹೊರಡಿಸಬೇಕು ತಹಶಿಲ್ದಾರ ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಪರಿಹರಿಸುವಂತೆ ಕಠಿಣ ಆದೇಶ ಹೊರಡಿಸಬೇಕು ಎಂದರು.
ಜಿಲ್ಲೆಯ 13 ತಾಲೂಕುಗಳಲ್ಲಿ ತಹಶಿಲ್ದಾರರು ಇದು ಸಿವಿಲ್ ವಿಷಯ ಎಂದು ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ನ್ಯಾಯಾಲಯಕ್ಕೆ ಹೋಗುವಂತೆ ಆದೇಶ ನೀಡುತ್ತಿದ್ದಾರೆ, ತಾವೂ ಹಿಂದೆ ಹೊರಡಿಸಿರುವ ಆದೇಶದಂತೆ ಅಧಿಕಾರಿಗಳು ಸಂಪೂರ್ಣ ಅಧಿಕಾರ ನಮಗಿಲ್ಲ ಎಂದು ರೈತರ ಜೀವನದವನ್ನು ಕತ್ತಲೆಗೆ ದುಡುತ್ತಿದ್ದಾರೆ, ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕೆಂದು ಸಮಸ್ತ ರೈತರ ಪರವಾಗಿ ವಿನಂತಿಸಿಕೊಳ್ಳುತ್ತೆವೆ ಎಂದರು.
ಮನವಿ ಸ್ವೀಕರಿಸಿದ ಸಚಿವರು ಕಾನೂನು ಇರುವುದೇ ಹೀಗೆ ಎಂದು ಬೇಜಾವಾಬ್ದಾರಿ ಉತ್ತರ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು. ರಾತೋರಾತ್ರಿ ತಮಗೆ ಬೇಕಾದ ಹಾಗೆ ಕಾನೂನು ತಿದ್ದುಪಡಿ ಮಾಡಿ ಲಾಭ ಮಾಡಿಕೊಳ್ಳುವುದು, ರಾಜ್ಯದ ಎಲ್ಲಾ ಶಾಸಕರ, ಸಚಿವರ ಸಂಬಳ ಹೆಚ್ಚು ಮಾಡಿಕೊಳ್ಳಲು ಯಾರ ಅನುಮತಿ ಕೂಡಾ ಬೇಕಾಗಿಲ್ಲ, ಆದರೆ ರೈತರ ದಾರಿ ಸಮಸ್ಯೆ ಬಗೆಹರೆಸಲು ಇವರಿಗೆ ಎನು ತಾಪತ್ರೆಯ ಎಂದು ಹಿಡಿ ಶಾಪ ಹಾಕಿದ ರೈತರು
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಮಹಾಂತೇಶ ತಿಮ್ಮಾಪುರ ಸೇರಿದಂತೆ ಅನೇಕರು ಇದ್ದರು.