ಹೂವಿನಹಡಗಲಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಹೂವಿನಹಡಗಲಿ 22: ಸಮಾಜದ ಪ್ರಗತಿಗೆ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಡಾ.ಶೈಲಜಾ ಪವಾಡ ಶೆಟ್ರು ಹೇಳಿದರು.ಪಟ್ಟಣದ ಗವಿಮಠದಲ್ಲಿ ಬಣಜಿಗ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮನೆ ಮನಕ್ಕೆ ಮಹಾದೇವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬದ ಬೆಳವಣಿಗೆಗೆ ಸಹಾಯ ಆಗುತ್ತದೆ. ಮನೆಯ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ತಿಳಿಸಿದರು.ದುಡಿಯುವ ವರ್ಗದ ಆಸಂಘಟಿತ ಮಹಿಳೆಯರ ವೇತನ ತಾರತಮ್ಯವನ್ನು ಆಳುವ ಸರ್ಕಾರಗಳು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು ಎಂದರು.  

ಶಿಕ್ಷಕಿ ವೈ.ಜಯಮ್ಮ ಅಕ್ಕಮಹಾದೇವಿ ವಚನಗಳ ಕುರಿತು ಮಾತನಾಡಿದರು. ಶಿಕ್ಷಕ ಕೆ.ಮಲ್ಲಿಕಾರ್ಜುನ ಯೋಗ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಶೈಲಶ್ರೀ ಮಹಿಳೆಯರ ಆರೋಗ್ಯ ಸಂವರ್ಧನೆ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು. ಗವಿಮಠದ ಶರಣಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿವೃತ್ತ ಶಿಕ್ಷಕಿ ವನಜಮ್ಮ ಅಗಡಿ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗೌರವಿಸಲಾಯಿತು. ಮಹಿಳಾ ಘಟಕದ ಎಸ್‌.ಎಸ್‌. ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ನಾಗರತ್ನ ಕುಂಚೂರು, ಹಿರೇಹಡಗಲಿಯ ಪುಷ್ಪಾಗಿರಿಮಲ್ಲಿಗೆ ಮಹಿಳಾ ಬ್ಯಾಂಕಿನ ಅಧ್ಯಕ್ಷೆ ಸವಿತಾ ಅಂಗಡಿ ಉಪಸ್ಥಿತರಿದ್ದರು. ಭುವನೇಶ್ವರಿ ಎ.ಕೆ., ಸುಮಂಗಲಾ ಕೆ., ರೇಖಾ ಅಂಡಿಗಿ, ನಿರುಪಮಾ, ಸವಿತಾ ಕುಂಬಾರಿ ನಿರ್ವಹಿಸಿದರು.