ಬೆಟಗೇರಿ: ಬಿರು ಬಿಸಿಲಿನ ನಡುವೆ ಶಾಂತಿಯುತ ಮತದಾನ

ಬೆಟಗೇರಿ 07: ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ 2024ರ ಲೋಕಸಭೆ ಚುನಾವಣೆಯ ಮತದಾನ ಮೇ.7ರಂದು ನಡೆದು ಶೇಕಡಾ 70.17ರಷ್ಟು ಮತದಾನ ಆಗಿದೆ. ಬೆಟಗೇರಿ ಗ್ರಾಮದ 5 ಮತಗಟ್ಟೆಗಳು ಸೇರಿ ಒಟ್ಟು 4345 ಜನ ಮತದಾರರ ಪೈಕಿ 3049 ಜನ ಮತದಾರರು ಮತದಾನ ಮಾಡಿದ್ದಾರೆ.  

ರಾಜಕೀಯ ಮುಖಂಡರು ತಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರೆ, ಬಿರು ಬಿಸಿಲು ಲೆಕ್ಕಿಸದೇ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ತೋಟದ ಮನೆಗಳಿಂದ ಕ್ಯೂಸೇರ್, ಬೈಕ್ ಮೂಲಕ ಮತದಾರರನ್ನು ಕರೆ ತಂದ ಬಳಿಕ ಮತದಾರರು ಮತ ಚಲಾಯಿಸಿದರು. 

ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳಲ್ಲಿರುವ ನಿಯೋಜಿತ ಮತದಾನದ ಮತಗಟ್ಟೆ ಕೊಠಡಿಗಳಿಗೆ ಸ್ಥಳೀಯ ಅಂಗವಿಕಲ, ವಯೋವೃದ್ಧರನ್ನು ವ್ಹಿಲ್ ಚೇರ್‌ನಲ್ಲಿ ಕೂಡ್ರಿಸಿಕೊಂಡು ಮತ ಹಾಕಿಸಲು ಕರೆತರುತ್ತಿರುವ ನೋಟ ಸಾಮಾನ್ಯವಾಗಿತ್ತು.   

ಬೆಟಗೇರಿ ಗ್ರಾಮದ 5 ಮತಗಟ್ಟೆಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೋಂಗಾಡ್ಸ್‌, ಪೊಲೀಸ್ ಪೇದೆಗಳಿಂದ ಬಂದುಬಸ್ತ ಕೈಗೊಳ್ಳಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಸ್ಥಳೀಯ ಮತದಾರರು ಮದುವೆ ಮನೆಯಂತೆ ಆಕರ್ಷಿತವಾದ ಮತಗಟ್ಟೆಗಳಿಗೆ ತೆರಳಿ ಶಾಂತತೆಯಿಂದ ಮತದಾನ ಮಾಡಿದರು.  

ಮತಗಟ್ಟೆಗಳ ಅಧಿಕಾರಿ, ಸಿಬ್ಬಂದಿ, ಸ್ಥಳೀಯ ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿವರು ಸೇರಿ ಸುಮಾರು 45 ಕ್ಕೂ ಹೆಚ್ಚು ಜನರು ಗ್ರಾಮದ ಮತದಾನದ ಐದೂ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಿದರು. ಮತಗಟ್ಟೆಗಳ ಎಲ್ಲ ಸಿಬ್ಬಂದಿಯವರಿಗೆ ಮೂಲ ಸೌಕರ‌್ಯಗಳನ್ನು ಕಲ್ಪಿಸಲಾಗಿತ್ತು ಎಂದು ಇಲ್ಲಿಯ ಮತದಾನ ಕೇಂದ್ರದ ಸೆಕ್ಟರ್ ಆಫಿಸರ್ ಶಿವರಾಜ.ಟಿ., ಹಾಗೂ ರಮೇಶ ಬುದ್ನಿ ಜಂಟಿಯಾಗಿ ತಿಳಿಸಿದ್ದಾರೆ.       

ಗ್ರಾಮ ಲೆಕ್ಕಾಧಿಕಾರಿ ರುದ್ರಮ್ಮ ಪೂಜೇರಿ, ವೈ.ಸಿ.ಶೀಗಿಹಳ್ಳಿ, ಎಸ್‌.ಬಿ.ಸನದಿ, ಗ್ರಾಮ ಪಂಚಾಯ್ತಿ ಸಿಬ್ಬಂದಿ, ಬಿಎಲ್‌ಒಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.