ಬಳ್ಳಾರಿ: ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಅಭಿಪ್ರಾಯ
Bellary: Lidkar President Mundaragi Nagaraj's opinion on Lord Buddha Jayanti program
ಲೋಕದರ್ಶನ ವರದಿ
ಬಳ್ಳಾರಿ 02: ಭಾರತವು ಬುದ್ಧನ ನಾಡು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರವಲ್ಲ, ಬದಲಾಗಿ ಶಾಂತಿ ಮತ್ತು ಅಹಿಂಸೆಯನ್ನು ಸಾರಿದ ಬುದ್ಧನ ನಾಡಾಗಿದೆ ಎಂದು ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸದ ಉಲ್ಲೇಖದಂತೆ ಕ್ರಿಸ್ತಪೂರ್ವ 563ರಲ್ಲಿ ಬುದ್ಧನು ಈ ದೇಶದಲ್ಲಿ ಜನಿಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಇಂದು ಬೌದ್ಧ ಧರ್ಮವು ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ ಎಂದು ಅವರು ಸ್ಮರಿಸಿದರು.
ಗೌತಮ ಬುದ್ಧನು ಯುದ್ಧಕ್ಕಿಂತ ಶಾಂತಿಯೇ ಮೇಲು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ಶಾಕ್ಯ ರಾಜ್ಯದ ಸಿದ್ಧಾರ್ಥನಾಗಿದ್ದಾಗ, ನದಿ ನೀರಿನ ವಿವಾದದ ಕುರಿತು ನಡೆದ ಸಂಘದ ಚರ್ಚೆಯಲ್ಲಿ ಯುದ್ಧದ ಬದಲು ಶಾಂತಿ ಮಾತುಕತೆಗೆ ಒತ್ತು ನೀಡಿದ್ದರು. ಅವರ ಈ ಶಾಂತಿ ಮಂತ್ರವು ಇಂದಿನ ಜಾಗತಿಕ ಯುದ್ಧಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೌದ್ಧಧರ್ಮದ ಜೀವಾಳವಾದ ಪಂಚಶೀಲ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು ಬಳ್ಳಾರಿ ನಗರದ ಯಾವುದಾದರೂ ಒಂದು ಪ್ರಶಾಂತವಾದ ಪ್ರದೇಶದಲ್ಲಿ ಬುದ್ಧನ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡುವ ಆಶಯ ಹೊಂದಲಾಗಿದೆ ಎಂದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಗೌತಮ ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಅಹಿಂಸೆ ಮತ್ತು ಶಾಂತಿಯ ಜಾಗತಿಕ ಸಂಕೇತ. ತನ್ನ 29ನೇ ವಯಸ್ಸಿನಲ್ಲೇ ರಾಜ್ಯಭೋಗ, ಪತ್ನಿ, ಮಗು ಮತ್ತು ವೈಭವದ ಜೀವನವನ್ನು ತ್ಯಜಿಸಿ ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಎಂದು ತಿಳಿಸಿದರು.
ಬುದ್ಧನು ಅರಮನೆಯ ಸುಖ-ಭೋಗಗಳನ್ನು ತೊರೆದು ಅಹಿಂಸೆಯ ಮಾರ್ಗವನ್ನು ಆಯ್ದುಕೊಂಡಿದ್ದು ಇಂದಿನ ತಲೆಮಾರಿಗೆ ದೊಡ್ಡ ಪ್ರೇರಣೆ. ನಮ್ಮ ದೇಶಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳು ದಾರೀದೀಪವಾಗಿದ್ದಾರೆ. ಇವರಲ್ಲಿ ಬುದ್ಧನು ಪ್ರಾಚೀನ ಕಾಲದಲ್ಲೇ ಅಹಿಂಸೆಯ ಬುನಾದಿ ಹಾಕಿದವರು. ಇಂದಿನ ಅಶಾಂತಿಯ ವಾತಾವರಣದಲ್ಲಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯವರು ಸಮಾಜದ ವಿವಿಧ ಕಾಲಘಟ್ಟಗಳಲ್ಲಿ ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಚೇತನಗಳು. ಅವರ ವಿಚಾರಧಾರೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಬುದ್ಧ ಮತ್ತು ಗಾಂಧೀಜಿ ಇಬ್ಬರೂ ಅಹಿಂಸೆಯೇ ಪರಮ ಧರ್ಮ ಎಂದು ಸಾರಿದವರು. ಸಮಾಜದಲ್ಲಿ ಶಾಂತಿ ನೆಲೆಸಲು ಸತ್ಯದ ಹಾದಿ ಅನಿವಾರ್ಯ ಎಂಬುದನ್ನು ಅವರು ಒತ್ತಿ ತಿಳಿಸಿದ್ದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಚಾತುರ್ವರ್ಣ ಪದ್ಧತಿಯ ವಿರುದ್ಧ ಬುದ್ಧ ಮತ್ತು ಅಂಬೇಡ್ಕರ್ ಅವರು ಧ್ವನಿ ಎತ್ತಿದರು. ಬಡವರು ಮತ್ತು ಅನಕ್ಷರಸ್ಥರನ್ನು ಮೂಢನಂಬಿಕೆಗಳಿಂದ ಹೊರತರಲು ಅವರು ಶ್ರಮಿಸಿದರು ಎಂದರು.
ಕೇವಲ ಮದುವೆಯಾಗದಿರುವುದು ಬ್ರಹ್ಮಚರ್ಯವಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿ ಶಿಸ್ತು ಮತ್ತು ಕಟ್ಟುನಿಟ್ಟಾದ ಜೀವನ ನಡೆಸುವುದು ನಿಜವಾದ ಬ್ರಹ್ಮಚರ್ಯ ಎಂದು ಬುದ್ಧನ ಬೋಧನೆಗಳನ್ನು ವಿಶ್ಲೇಷಿಸಿದರು.
ಬಳ್ಳಾರಿಯ ಎಸ್‌ಎಸ್‌ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೋಮನಾಥ್ ಸಿ.ಹೆಚ್ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪ ದಳವಾಯಿ ಅಂಬಣ್ಣ ತಂಡ ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು.
*ಮೆರವಣಿಗೆ:*
ಜಯಂತಿ ಅಂಗವಾಗಿ ಸಂಜೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯು ಬಳ್ಳಾರಿ ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಗಡಿಗೆ ಚನ್ನಪ್ಪ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಇಂದಿರಾ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಸಮುಚ್ಚಯದ ಸಭಾಂಗಣದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಮಲರತ್ನ ಬಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಬುದ್ಧ ಅನುಯಾಯಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 