ಬಳ್ಳಾರಿ; ತುಂಗಭದ್ರಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ

ಲೋಕದರ್ಶನ ವರದಿ

ಬಳ್ಳಾರಿ 05: ತುಂಗಭದ್ರಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಿಂದಾಗಿ ಅಣೆಕಟ್ಟೆ ಒಳಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 

ಗುರುವಾರ ಅಣೆಕಟ್ಟೆಗೆ 39142 ಕ್ಯೂಸೆಕ್ ಒಳಹರಿವಿತ್ತು. ತುಂಗಾ ಜಲಾಶಯದಿಂದ 37339 ಹಾಗೂ ಭದ್ರಾ ಅಣೆಕಟ್ಟೆಯಿಂದ 11868 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಇದರಿಂದಾಗಿ ಯಾವುದೇ ಸಂದರ್ಭದಲ್ಲಿ ತುಂಗಭದ್ರಾ ಅಣೆಕಟ್ಟೆ ಒಳಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಗಳಿವೆ. 

ಅಣೆಕಟ್ಟೆಯಿಂದ ಗುರುವಾರ ಬೆಳಗ್ಗೆ 8ಕ್ಕೆ 12 ಗೇಟ್ಗಳ ಮೂಲಕ 36408 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ಬೆಳಗ್ಗೆ 10ಕ್ಕೆ 20 ಗೇಟ್ಗಳ ಮೂಲಕ ನದಿಗೆ 45710 ಕ್ಯೂಸೆಕ್ ನೀರು ಹರಿಸಲಾಯಿತು. 

ತುಂಗಾ, ಭದ್ರಾ ಹಾಗೂ ವರದಾ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣ ಆಧರಿಸಿ ನದಿಗೆ 50 ಸಾವಿರದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆಗಳಿವೆ. ಇದರಿಂದಾಗಿ ಅಣೆಕಟ್ಟೆ ಕೆಳಭಾಗದ ನದಿಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.