ಬಳ್ಳಾರಿ: ಬೆಸ್ಟ್ ಎಂಪ್ಲಾಯ್ ಪ್ರಶಸ್ತಿ

ಬಳ್ಳಾರಿ 14: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಇ- ಆಫೀಸ್ ಅನುಷ್ಠಾನಗೊಂಡಿದ್ದು, ಕಡತಗಳು ವಿಳಂಬಕ್ಕೆ ಅಸ್ಪದವಿಲ್ಲದೇ ಶೀಘ್ರವಾಗಿ ವಿಲೇವಾರಿಯಾಗುತ್ತಿವೆ. 

ಕಡತಗಳ ಶೀಘ್ರ ವಿಲೇವಾರಿ ಮಾಡುವುದರ ಮೂಲಕ ಜನರಿಗೆ ಸಕಾಲದಲ್ಲಿ ಸ್ಪಂದಿಸುವ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಾಗಿಯೇ ಜಿಲ್ಲಾಧಿಕಾರಿನಕುಲ್ ಬೆಸ್ಟ್ ಎಂಪ್ಲಾಯ್ ಪ್ರಶಸ್ತಿ ಸ್ಥಾಪಿಸಿದ್ದು, ಪ್ರತಿ ತಿಂಗಳು ತಮ್ಮ ವ್ಯಾಪ್ತಿಗೆ ಬರುವ ಅರ್ಜಿಗಳು, ನಿಗದಿಪಡಿಸಿದ ಅವಧಿಯೊಳಗೆ ಕಡತಗಳ ವಿಲೇವಾರಿ ಮೂಲಕ ಸ್ಪಂದನೆ, ಇ-ಹಾಜರಾತಿಯ ಪ್ರಗತಿಯನ್ನು ಪರಿಶೀಲಿಸಿ ಮೂರು ಜನರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. 

ಸೆಪ್ಟೆಂಬರ್ ತಿಂಗಳ ಪ್ರಶಸ್ತಿಗೆ ಡಿಸಿ ಕಚೇರಿಯ ಕೆ.ಸುಧಾ, ಮಂಜುಳಾ ನಂದಿಕೋಲಮಠ, ಎಂ.ಹಸೀನಾಬಾನು ಅವರು ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಜಿಲ್ಲಾಧಿಕಾರಿ ನಕುಲ್ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಶುಭಹಾರೈಸಿದರು. 

ಪ್ರಶಸ್ತಿ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಡಿಸಿ ಕಚೇರಿಯ ಎಲ್ಲ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡಬೇಕು, ಕಚೇರಿಗೆ ಸಮಸ್ಯೆ ಹೊತ್ತು ಬರುವವರೆಗೆ ಸಕಾಲದಲ್ಲಿ ಸ್ಪಂದಿಸಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.