ಬಳ್ಳಾರಿ 10: ತುಂಗಾಭದ್ರಾ ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್ ನೀರನ್ನು ಶನಿವಾರ ಸಂಜೆ ಅಣೆಕಟ್ಟಿಗೆ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.
ತುಂಗಾಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ್ ಅವರು ಡ್ಯಾಂಗೆ ಪೂಜೆ ಸಲ್ಲಿಸಿ ನೀರನ್ನು ನದಿಗೆ ಬಿಡುಗಡೆ ಮಾಡುವುದಕ್ಕೆ ಚಾಲನೆ ನೀಡಿದರು. 10 ಕ್ರಸ್ಟ್ ಗೇಟ್ಗಳನ್ನು ಮೊದಲಿಗೆ 1.5 ಅಡಿ ಎತ್ತರದಲ್ಲಿ ತೆರೆಯುವುದರ ಮೂಲಕ ನದಿಗೆ 25 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ನಾಗಮೋಹನ್ ಅವರು ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಪ್ರವಾಹ ಹಾಗೂ ಜನ-ಜಾನುವಾರುಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಒಂದೇ ಬಾರಿಗೆ ಅಧಿಕ ನೀರನ್ನು ಬಿಡುವುದರ ಬದಲಿಗೆ ಹಂತಹಂತವಾಗಿ ಅಧಿಕ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮೊದಲಿಗೆ 25 ಸಾವಿರ ಕ್ಯೂಸೆಕ್ ಬಿಡಲಾಗುತ್ತಿದ್ದು, ನಂತರ ಹಂತಹಂತವಾಗಿ ಅಧಿಕ ನೀರನ್ನು ನದಿಗೆ ಹರಿಸಲಾಗುವುದು. ನದಿ ಪಾತ್ರದಲ್ಲಿ ಬರುವ ಗ್ರಾಮಗಳು,ನಗರ/ಪಟ್ಟಣದ ಜನರುಗಳು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು
ಡ್ಯಾಂ ತುಂಬಿರುವುದು ಒಂದೇಡೆ ಸಂತಸ ಮತ್ತು ನೆರೆ ಹಾವಳಿಯಿಂದ ರಾಜ್ಯದಂತ ಜನರು ಪಡುತ್ತಿರುವ ಬವಣೆ ನೋಡಿ ದು:ಖವಾಗುತ್ತಿದೆ ಎಂದು ಹೇಳಿದ ಸಂಸದ ಕರಡಿ ಸಂಗಣ್ಣ ಅವರು ಈ ನೆರೆಹಾವಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು, ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರೆಬಾಧಿತ ಪ್ರದೇಶಗಳಲ್ಲೆಡೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸುತ್ತಿದ್ದಾರೆ. ನೆರೆಯಿಂದ ರಾಜ್ಯದಲ್ಲಾಗಿರುವ ಹಾನಿಯ ವಿವರ ಹಾಗೂ ನೆರವು ಕೋರಿ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ತುಂಗಾಭದ್ರಾ ಬೋರ್ಡ್ ಅಧಿಕಾರಿಗಳು ಮತ್ತು ರೈತಪರ ಮುಖಂಡರು ಸೇರಿದಂತೆ ಇತರರು ಇದ್ದರು.
ತಡರಾತ್ರಿ 1.25ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ:
ತುಂಗಾಭದ್ರಾ ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್ನ್ನು ಶನಿವಾರ ಹರಿಬಿಡಲಾಗುತ್ತಿದ್ದು, ಇಂದು ತಡರಾತ್ರಿ ಅಥವಾ ಭಾನುವಾರ ಬೆಳಗಿನ ಜಾವ 1.25ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಡುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಇದರಿಂದ ಹೊಸಪೇಟೆ. ಕಂಪ್ಲ್ಲಿ ಕುರುಗೋಡು ಮತ್ತು ಸಿರುಗುಪ್ಪ ತಾಲ್ಲೂಕುಗಳು ಸೇರಿ ವಿವಿಧೆಡೆ ನದಿ ತೀರ ಬರುವ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳಿದ್ದು,ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ನದಿಪಾತ್ರದಲ್ಲಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಾಂತರವಾಗಬೇಕು ಎಂದು ಜಿಲ್ಲಾಧಿಕಾರಿ ನಕುಲ್ ಅವರು ಮತ್ತೊಮ್ಮೆ ಕೋರಿಕೊಂಡಿದ್ದಾರೆ.
ಸದ್ಯ 25 ಸಾವಿರ ಕ್ಯೂಸೆಕ್ ನದಿಗೆ ಹರಿಬಿಡಲಾಗಿದೆ. ಅದನ್ನು 50 ಸಾವಿರ ಕ್ಯೂಸೆಕ್ಗೆ ಏರಿಸಲಾಗುತ್ತದೆ. ನಂತರ ಹಂತಹಂತವಾಗಿ ಒಳಹರಿವನ್ನು ಪರಿಶೀಲಿಸಿ 1ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲು ಕ್ರಮವಹಿಸಲಾಗುತ್ತದೆ. ಸದ್ಯ ಒಳಹರಿವು 2.10ಲಕ್ಷ ಕ್ಯೂಸೆಕ್ ಇದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ತಿಳಿಸಿದ್ದಾರೆ.
ಪ್ರವಾಹ ಮನ್ಸೂಚನೆ: ಮನವಿ
ತುಂಗಭದ್ರಾ ಜಲಾಶಯದಲ್ಲಿ ಆ.10ರಂದು ಬೆಳಿಗ್ಗೆ 8ಕ್ಕೆ ಜಲಾಶಯದ ಮಟ್ಟ 1626.08 ಅಡಿಗಳಷ್ಟು, ಸಾಮಥ್ರ್ಯ 76.377 ಟಿ.ಎಂ.ಸಿ, ಒಳಹರಿವು 1,84,012 ಕ್ಯೂಸೆಕ್ಸ್ ಹಾಗೂ ಹೊರಹರಿವು 2522 ಕ್ಯೂಸೆಕ್ಸ್ ಇರುತ್ತದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕೇಂದ್ರ ಜಲ ಆಯೋಗ ನೀಡಿರುವ ಒಳಹರಿವಿನ ಗೇಜನ ಪ್ರಮಾಣದಂತೆ ಹರಳಹಳ್ಳಿ ಗೇಜನಿಂದ 1,69,512 ಕ್ಯೂಸೆಕ್ಸ್ ಮತ್ತು ಮರೋಳು ಗೇಜನಿಂದ 56,504 ಕ್ಯೂಸೆಕ್ಸ್ ಒಟ್ಟಾರೆ ತುಂಗಭದ್ರಾ ಜಲಾಶಯಕ್ಕೆ 2,26,016 ಕ್ಯೂಸೆಕ್ಸ್ ಒಳಹರಿವು ಇರುತ್ತದೆ.
ತುಂಗಭದ್ರ್ರಾ ಜಲಾಶಯದ ಆಪರೇಶನ್ ಷೆಡ್ಯೂಲ್ನ ಪ್ರಕಾರ ಕೇಂದ್ರ ಜಲ ಆಯೋಗದ ನೀರಿನ ಗೇಜನ ಪ್ರಮಾಣದಂತೆ ಒಟ್ಟಾರೆ ತುಂಗಭದ್ರ್ರಾ ಜಲಾಶಯಕ್ಕೆ 2,26,016 ಕ್ಯೂಸೆಕ್ಸ್ ಒಳಹರಿವು ಇರುವುದರಿಂದ ಜಲಾಶಯದಿಂದ ಶನಿವಾರ ಮದ್ಯಾಹ್ನ 3ಕ್ಕೆ ಸುಮಾರು 25 ಸಾವಿರ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ. ಹೊರಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ನದಿ ಪಾತ್ರದಲ್ಲಿ ಬರುವ ನಗರ/ಪಟ್ಟಣದ ಜನರುಗಳಿಗೆ ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತವಾಗುವಂತೆ ಕನರ್ಾಟಕ ನೀರಾವರಿ ನಿಗಮ ನಿಯಮಿತ ತುಂಗಾಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.