ನಿಷೇಧಿತ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ

ನಿಷೇಧಿತ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ  Anti-banned plastic campaign

ದಾಂಡೇಲಿ 9:  ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ನಗರ ನಿರ್ಮಾಣದ ಉದ್ದೇಶದಿಂದ ದಾಂಡೇಲಿ ನಗರಸಭೆ ನಡೆಸುತ್ತಿರುವ ನಿಷೇಧಿತ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ ಮತ್ತೊಮ್ಮೆ ಚುರುಕುಗೊಂಡಿದೆ. ನಗರಸಭೆಯ ಆರೋಗ್ಯ ನೀರೀಕ್ಷಕ ವಿಲಾಸ ಕುಮಾರ ಅವರ ನೇತೃತ್ವದ ತಂಡ, ಪೌರಾಯುಕ್ತ ವಿವೇಕ ಬನ್ನೆ ಅವರ ಮಾರ್ಗದರ್ಶನದಲ್ಲಿ ನಗರದ ಜೆ.ಎನ್‌. ರಸ್ತೆ ಸೇರಿದಂತೆ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಕಳೆದ ಎರಡು ದಿನಗಳಿಂದ ಸತತ ದಾಳಿ ನಡೆಸಿ, ಸುಮಾರು 60 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು 10 ಸಾವಿರ ರೂಪಾಯಿ ದಂಡ ವಸೂಲು ಮಾಡಿದೆ. ಆದರೆ ನಗರಸಭೆಯ ನಿರಂತರ ದಾಳಿಗಳು ಮತ್ತು ಎಚ್ಚರಿಕೆಗಳ ನಡುವೆಯೂ ಕೆಲ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಸಿದ್ಧರಿಲ್ಲ ಎಂಬುದು ಈ ಕಾರ್ಯಾಚರಣೆಯಿಂದ ಸ್ಪಷ್ಟವಾಗಿದೆ.

ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ ಚೀಲಗಳನ್ನು ಕದ್ದುಮುಚ್ಚಿ ಸಂಗ್ರಹಿಸಿ ಗ್ರಾಹಕರಿಗೆ ಸಾಮಾನು ನೀಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.ಪ್ಲಾಸ್ಟಿಕ್ ಬಳಕೆಗೆ ಸರ್ಕಾರ ನಿಷೇಧ ಹೇರಿದ ಹಲವು ವರ್ಷಗಳಾದರೂ, ಅದರ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದರೂ, ಕೆಲವು ವ್ಯಾಪಾರಿಗಳು ಇನ್ನೂ ಹಳೆಯ ಪದ್ಧತಿಯನ್ನು ಮುಂದುವರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಡಿಮೆ ವೆಚ್ಚ ಮತ್ತು ಗ್ರಾಹಕರ ಬೇಡಿಕೆಯನ್ನು ನೆಪವನ್ನಾಗಿ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬರುತ್ತಿದೆ. ನಗರಸಭೆ ಅಧಿಕಾರಿಗಳ ಅಭಿಪ್ರಾಯದಂತೆ, ದಂಡ ಮತ್ತು ದಾಳಿಗಳ ಮೂಲಕ ಮಾತ್ರ ಪ್ಲಾಸ್ಟಿಕ್ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಾಧ್ಯವಿಲ್ಲ. ವ್ಯಾಪಾರಿಗಳ ಜೊತೆಗೆ ಸಾರ್ವಜನಿಕರೂ ಸಹ ಬಟ್ಟೆ ಅಥವಾ ಮರುಬಳಕೆ ಚೀಲಗಳನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಬೇಕು.

ಗ್ರಾಹಕರು ಪ್ಲಾಸ್ಟಿಕ್ ಚೀಲಗಳನ್ನು ಬೇಡದೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸಿದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ನಗರದ ಕನಸು ನನಸಾಗಲು ಸಾಧ್ಯ.ಪರಿಸರ ತಜ್ಞರು ಸಹ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಣ್ಣು, ನೀರು ಹಾಗೂ ಪ್ರಾಣಿ ಸಂಕುಲಕ್ಕೆ ಉಂಟಾಗುತ್ತಿರುವ ಹಾನಿಯನ್ನು ಉಲ್ಲೇಖಿಸುತ್ತಿದ್ದು, ನಗರಸಭೆಯ ಕ್ರಮಗಳಿಗೆ ಜನಸಾಮಾನ್ಯರ ಸಂಪೂರ್ಣ ಬೆಂಬಲ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ದಾಂಡೇಲಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ನಗರಸಭೆಯ ಪ್ರಯತ್ನ ಶ್ಲಾಘನೀಯವಾದರೂ, ಅದರ ಯಶಸ್ಸು ವ್ಯಾಪಾರಿಗಳು ಮತ್ತು ನಾಗರಿಕರ ಜವಾಬ್ದಾರಿಯುತ ಸಹಕಾರದ ಮೇಲೆ ಅವಲಂಬಿತವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಜಾಗೃತಿ ಅಭಿಯಾನಗಳನ್ನೂ ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕಾದ ಅಗತ್ಯತೆ ಇದೆ.