ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವೂ ಸಿಗಬೇಕು : ರಾಜುಗೌಡ ಪಾಟೀಲ

ದೇವರಹಿಪ್ಪರಗಿ 17: ವ್ಯಕ್ತಿಯ ವ್ಯಕ್ತಿತ್ವ ರೂಪಗೊಳ್ಳಲು ಮನುಜರಲ್ಲಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವೂ ಸಿಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಕೀಲ ಎ.ಎಂ.ತಾಂಬೋಳಿಯವರು ಮಸೀದಿ ನಿರ್ಮಾಣ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಬುಧವಾರ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾದ ಮಸೀದೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ಚಿಂತನೆ ಕಡಿಮೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ತಾಂಬೋಳಿ ವಕೀಲರು ತಮ್ಮ ಧರ್ಮ ಪತ್ನಿ ಹೆಸರಲ್ಲಿ 25 ಲಕ್ಷರೂ ವೆಚ್ಚದಲ್ಲಿ ಸ್ವಂತ ಖರ್ಚಿನಿಂದ ಮಸೀದೆ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯವಾಗಿದ್ದು, ಇದರ ಸದುಪಯೋಗವಾಗಲಿ ಎಂದರು.ರಾಜ್ಯ ಕೆಪಿಸಿಸಿ ವಕ್ತಾರ ಎಸ್‌. ಎಂ. ಪಾಟೀಲ (ಗಣಿಹಾರ) ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಮೂಡಬೇಕಾದರೆ ಮೊದಲು ಶಿಕ್ಷಣ ಬೇಕು. ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಲು ಪಾಲಕರು ಪ್ರಯತ್ನಿಸಬೇಕು. ಶಿಕ್ಷಣದಿಂದಲೇ ಎಲ್ಲವೂ ಸಾಧ್ಯವಾಗಲಿದೆ. ಮಸಿದೆಯ ಜೊತೆಗೆ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಿ, ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಂಘಟಕರಾದ ನ್ಯಾಯವಾದಿ ಎ.ಎಂ. ತಾಂಬೋಳಿ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ದಸ್ತಗೀರ ಮುಲ್ಲಾ, ಡಾ. ಆರ್‌. ಆರ್‌. ನಾಯಿಕ, ಮೌಲಾನಾ ಹಫೀಜ್ ಗಿರಗಾಂವಿಕರ, ಕಬೂಲ್ ಕೊಕಟನೂರ, ಮಾತನಾಡಿದರು. ಸ್ಥಳಿಯ ಗದ್ದುಗೆ ಮಠದ ಮಡಿವಾಳೇಶ್ವರ ಶ್ರೀಗಳು ಹಾಗೂ ಆವುಗೇಶ್ವರ ತಪೋವನದ ಶಿವಯೋಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಶತ 90ಕ್ಕೂ ಹೆಚ್ಚು ಅಂಕ ಪಡೆದ ಎಂ.ಜಿ.ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡರಾದ ಸಂತೋಷಗೌಡ ದೊಡ್ಡಮನಿ, ಜೆಡಿಎಸ್ ಮುಖಂಡರಾದ ರಿಯಾಜ ಯಲಗಾರ, ಎ.ಎನ್‌. ಚಟ್ಟರಕಿ, ನಜೀರಸಾಬ್ ಬೀಳಗಿ, ಮಹಿಬೂಬ ಹುಂಡೇಕಾರ, ಲಾಲಾಸಾಬ ಮಳಖೇಡ, ಹಸನ್ ವಡ್ಡೋಡಗಿ, ಹಿದಾಯತ್ ಮಾಶಾಳಕರ, ಸಲೀಮ ಶೇಖ, ಅಬ್ದುಲ್ಜಬ್ಬಾರ ಮೊಮೀನ, ಮುನ್ನಾ ಮಳಖೇಡ, ಬಂದೇನವಾಜ್ ಕತ್ನಳ್ಳಿ, ಸಯೀದ ರೂಗಿ, ರೆಹಮಾನ್ ವಡ್ಡೋಡಗಿ ಸೇರಿದಂತೆ ಮಹಿಳೆಯರು, ಮಕ್ಕಳು ಸಾರ್ವಜನಿಕರು ಪಾಲ್ಗೊಂಡಿದ್ದರು.