ದಲಿತರ ಮೇಲೆ ದೌರ್ಜನ್ಯ ಆರೋಪ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ದಲಿತರ ಮೇಲೆ ದೌರ್ಜನ್ಯ ಆರೋಪ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ Allegations of atrocities against Dalits: Protest demanding action

ಲೋಕದರ್ಶನ ವರದಿ 

  ಹಾವೇರಿ, ಜು.16: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕುಂಬಾರಗೊಪ್ಪ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.  

ಪ್ರತಿಭಟನಾಕಾರರು ತಹಶೀಲ್ದಾರ್ ಶ್ರೀಮತಿ ಶರಣಮ್ಮ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.  ಮನವಿಯಲ್ಲಿ, ಕುಂಬಾರಗೊಪ್ಪ ಗ್ರಾಮದ ಏಳು ದಲಿತ ಕುಟುಂಬಗಳು ಹಲವು ವರ್ಷಗಳಿಂದ ಗ್ರಾಮದ ಸರ್ವೇ ನಂ.142 ಮತ್ತು 143ರ ಸುಮಾರು 18 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿವೆ. ಭೂಮಿಗೆ ಸಂಬಂಧಿಸಿದಂತೆ ರಾಜಿ ಸಂಧಾನ ನಡೆದಿದ್ದರೂ, ಇತ್ತೀಚಿನ ದಿನಗಳಲ್ಲಿ ದಲಿತ ಕುಟುಂಬಗಳ ಮೇಲೆ ಬೆದರಿಕೆ, ಹಲ್ಲೆ ಹಾಗೂ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ.  

ಒಬ್ಬ ದಲಿತ ವ್ಯಕ್ತಿಯ ಸಾವಿನ ಪ್ರಕರಣಕ್ಕೂ ನ್ಯಾಯ ಸಿಗದೆ, ಸಂಬಂಧಪಟ್ಟ ಅಧಿಕಾರಿಗಳು ಸಮರ​‍್ಕ ತನಿಖೆ ನಡೆಸಿಲ್ಲ ಎಂಬ ಆರೋಪವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.  

ದಲಿತ ಕುಟುಂಬಗಳ ಮೇಲೆ ನಿರಂತರವಾಗಿ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಹಲ್ಲೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ, ಮಂಜಪ್ಪ ಮರೋಳ, ಬಸವರಾಜ ಹಾದಿಮನಿ, ಬಸವರಾಜ ಪೂಜಾರ, ಬಸವರಾಜ ಎಸ್‌., ಎಂ.ಕೆ. ಮಖ್ಬೂಲ್, ಶೆಟ್ಟಿ ವಿಭೂತಿ, ಸುಭಾಷ್ ಚವ್ಹಾಣ್, ವೆಂಕಟೇಶ್ ಬಿಜಾರ್, ರಾಜು ತಳಗಟ್ಟ, ಮಹೇಶಪ್ಪ ಶಾಕಾರ, ಹಸೀನಾ ಹೆಡಿಯಾಳ, ವೀರಣ್ಣ ಗಿಡ್ಡಯ್ಯವರ, ಮೇಘರಾಜ ಹರಿಜನ, ಗುಡ್ಡಪ್ಪ ಹರಿಜನ, ಮಂಜುಳಾ ಹಾನಗಲ್, ಚೈತ್ರಾ ಕೊರವರ, ದೇವರಾಜ ಹುಬ್ಬಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.