ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕುಶಲಕರ್ಮಿಯ ಮಗಳ ಅಪೂರ್ವ ಸಾಧನೆ ಅಡಿವೇಶ ಮುಧೋಳ
ಬೆಟಗೇರಿ, 03: ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದಲ್ಲಿ, ಬಡತನದಲ್ಲಿ ಬೆಳೆದು ಬಂದ ಕುಶಲಕರ್ಮಿಯ ಮಗಳು ಅಮೃತಾ ಅಪೂರ್ವ ಸಾಧನೆ ಮಾಡಿದ್ದಾಳೆ.
ಕೌಜಲಗಿ ಪಟ್ಟಣದ ಡಾ. ಮಹದೇವಪ್ಪ ಮಡ್ಯಪ್ಪ ದಳವಾಯಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಬಡ ಕುಶಲಕರ್ಮಿ ಅನಿಲ ಕಂಬಾರ ಅವರ ಮಗಳು ಅಮೃತಾ ಕಂಬಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ರ ಪೈಕಿ 601, ಶೇ. 96.16 ಅಂಕಗಳನ್ನು ಗಳಿಸಿ ಉತ್ತೀರ್ಣಳಾಗಿದ್ದಾಳೆ.
ಅಮೃತಾಳ ತಂದೆ ಅನಿಲ ಕಂಬಾರ ಬಡಗಿತನ ಕೆಲಸದ ಕುಶಲಕರ್ಮಿಯಾಗಿದ್ದು, ಮಗಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ದುಡಿದು ಮಗಳ ಭವಿಷ್ಯವನ್ನು ರೂಪಿಸುತ್ತಿದ್ದಾನೆ. ತನಗೆ ಎಸ್.ಎಸ್.ಎಲ್.ಸಿ ಮುಗಿಸಲು ಸಾಧ್ಯವಾಗದಿದ್ದರೂ ಮಗಳಾದರೂ ಉತ್ತಮ ಶಿಕ್ಷಣವನ್ನು ಪಡೆಯಲಿ ಎಂದು ಕಷ್ಟಪಟ್ಟು ಮಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ತಂದೆಯ ಆಸೆಯಂತೆ ಮಗಳು ಅಮೃತಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರಮ ಪಟ್ಟು ಓದಿ, ಶಿಕ್ಷಕರು ಹೇಳಿದ ಪಾಠಗಳನ್ನು ಸರಿಯಾಗಿ ಕೇಳಿ ತಿಳಿದುಕೊಂಡು ಉತ್ತಮ ಫಲಿತಾಂಶವನ್ನು ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿ ಕುಶಲಕರ್ಮಿಯ ಪ್ರೀತಿಯ ಕನ್ನಡ ಕುವರಿಯಾಗಿದ್ದಾಳೆ. ಮಗಳ ಸಾಧನೆ ಕಂಡು ತಂದೆ ತಾಯಿಂದಿರು ಅಮೃತಾಳಿಗೆ ಸಿಹಿ ತಿನಿಸಿ ಸಂತೋಷ ವ್ಯಕ್ತಪಡಿಸಿದರು.