ಸತ್ಸಂಗದಿಂದ ನೆಮ್ಮದಿಯ ಜೀವನ ಸಾಧ್ಯ: ಹುಲಜಂತಿಶ್ರೀ

A peaceful life is possible through satsang: Hulajanthsree

ಸತ್ಸಂಗದಿಂದ ನೆಮ್ಮದಿಯ ಜೀವನ ಸಾಧ್ಯ: ಹುಲಜಂತಿಶ್ರೀ  

ದೇವರಹಿಪ್ಪರಗಿ 27: ಮನುಷ್ಯ ಜೀವನದಲ್ಲಿ ನೆಮ್ಮದಿ, ಶುಖ ಶಾಂತಿ ಹೊಂದಬೇಕೆಂದರೆ ಸತ್ಸಂಗದಲ್ಲಿ ಭಾಗವಹಿಸಬೇಕು. ಆಗಲೇ ಜೀವನ ಮುಕ್ತಿ ಹೊಂದಲು ಸಾಧ್ಯ ಎಂದು ಹುಲಜಂತಿ ಮಾಳಿಂಗರಾಯ ಶ್ರೀಗಳು ಹೇಳಿದರು. 

ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಬುಧವಾರದಂದು ಮಹಾಶಿವರಾತ್ರಿ ಅಂಗವಾಗಿ ನಡೆದ ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ಹಾಗೂ ಕೋಟಿ ಜಪ ಯಜ್ಞ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಮಾನಸಿಕ ನೆಮ್ಮದಿಗೆ ನಾನಾ ದಾರಿ ಹುಡುಕಿಕೊಂಡು ಹೋಗುತ್ತಾನೆ. ಆದರೆ ನಿಜವಾಗಿ ನೆಮ್ಮದಿ ಸಿಗುವುದೇ ಅಧ್ಯಾತ್ಮದಲ್ಲಿ. ವಾರಕೊಮ್ಮೆಯಾದರೂ ಅಧ್ಯಾತ್ಮ ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಹೊಂದಿ ಸುಂದರ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ಡಾ. ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕೇಳಲು ಸುತ್ತ ಮುತ್ತಲಿನ ಗ್ರಾಮದಿಂದ ಬಂದ ಭಕ್ತರ ಜೀವನದಲ್ಲಿ ಪರಿವರ್ತನೆ ಸಾಧ್ಯವಾಗಲಿದೆ ಎಂದರು. 

ಆಧ್ಯಾತ್ಮಿಕ ಪ್ರವಚನಕಾರ ಡಾ. ಅಮೃತಾನಂದ ಶ್ರೀಗಳು ಮಾತನಾಡಿ, ಭಾರತ ಶರಣರು, ಸಂತರು ಹಾಗೂ ಮಹಾಯೋಗಿಗಳು ನಡೆದಾಡಿದ ಪುಣ್ಯಭೂಮಿ. ಇಡೀ ಜಗತ್ತಿಗೆ ಅಧ್ಯಾತ್ಮದ ಬಗ್ಗೆ ಹೇಳಿಕೊಟ್ಟ ಏಕೈಕ ದೇಶ ನಮ್ಮದಾಗಿದೆ. ವಿಜಯಪುರದ ಜ್ಞಾನ ಯೋಗಾಶ್ರಮದ ಲಿಂ. ವೇದಾಂತ ಕೇಸರಿ ಮಲ್ಲಿಕಾರ್ಜುನ ಅಪ್ಪಾಜಿಯವರು ಹಾಗೂ ಲಿಂ. ಸಿದ್ದೇಶ್ವರ ಅಪ್ಪಾಜಿಯವರು ಆಧ್ಯಾತ್ಮಿಕ ಪ್ರವಚನದ ಜೊತೆ ಜಪ ಯಜ್ಞಗಳನ್ನು ತಿಳಿಸುತ್ತಿದ್ದರು. ಅದರಂತೆ ಇಂದು ಶಿವರಾತ್ರಿಯ ಅಂಗವಾಗಿ ಕೋಟಿ ಜಪ ಯಜ್ಞ ಮಾಡುವ ಮೂಲಕ ಈ ಭಾಗದಲ್ಲಿ ಇತಿಹಾಸ ಮಾಡಿದ್ದೀರಿ. ಅಪ್ಪಾಜಿಯವರು ವಿಶ್ರಾಂತಿಗಾಗಿ ಬಾಲಗಾಂವ ಆಶ್ರಮಕ್ಕೆ ಬರುತ್ತಿದ್ದರು, ನಾವೆಲ್ಲರೂ ಅವರ ಸೇವೆ ಮಾಡುತ್ತಾ ಇದ್ದೆವು ಎಂದು ತಮ್ಮ ಗುರುಗಳ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 

ನಂತರ ಪ್ರವಚನ ಕಾರ್ಯಕ್ರಮದಲ್ಲಿ ಸೇವೆಗೈದ ಮುಖಂಡ ಸಾಹೇಬಗೌಡ ರೆಡ್ಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಪ್ರಚಾರ ಸಮಿತಿಯ ಅಧ್ಯಕ್ಷ ಸಾಯಿಕುಮಾರ ಬಿಸನಾಳ ಅವರು ಮಾತನಾಡಿ ಸ್ವಾಗತಿಸಿದರು. ನಿವಾಳಖೇಡ ಗ್ರಾಮದ ಸಿದ್ದಕೃಪಾ ಮಲ್ಲಿಕಾರ್ಜುನ ಮಹಾಂತಮಠದ ಡಾ. ಬಸವಾನಂದ ಶ್ರೀಗಳು, ಬೋರೇಗಾವದ ಬಸವೇಶ್ವರ ಶ್ರೀಗಳು, ಕಡ್ಲೆವಾಡ ಗ್ರಾಮದ ಅಮೋಘಸಿದ್ಧ ಶ್ರೀಗಳು ಸೇರಿದಂತೆ ಹಲವಾರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖಂಡರುಗಳಾದ ಸಂಗನಗೌಡ ಬಿರಾದಾರ, ಸುರೇಶಗೌಡ ಬಿರಾದಾರ, ಶರಣಗೌಡ ಪಾಟೀಲ(ಶಿಕ್ಷಕರು), ದಾನಮ್ಮ,ಸಿದ್ದನಗೌಡ ಸೌಕಾರ ಚೌಡಕಿ,ವಿಠ್ಠಲ ಕನ್ನೋಳ್ಳಿ, ಮಲ್ಲಿಕಾರ್ಜುನಗೌಡ ಬಿರಾದಾರ,ವಿಠ್ಠಲ ದೇಗಿನಾಳ, ಸೋಮನಗೌಡ ಪಾಟೀಲ, ಸಿದ್ದನಗೌಡ ಭೀಮರಾಯಗೌಡ ಪಾಟೀಲ, ಸಿದ್ದನಗೌಡ ಜಲಪುರ ಹಾಗೂ ಕಡ್ಲೇವಾಡ, ನಿವಾಳಖೇಡ, ಮುಳಸಾವಳಗಿ, ಚಿಕ್ಕರೂಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.