ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ -ಯೋಜನಾ ನಿರ್ದೇಶಕಿ ಮಮತಾ ಹೊಸಗೌಡರ
ಹಾವೇರಿ 07: ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಬಲೆಯಲ್ಲ ಸಬಲೆ ಎಂದು ಸಾಬೀತುಮಾಡಿದ್ದಾಳೆ. ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಭಾರತ ದೇಶದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಅವರು ಹೇಳಿದರು. ನಗರದ ಜಿಲ್ಲಾ ಗಾಂಧಿ ಭವನದಲ್ಲಿ ಶುಕ್ರವಾರ ಹಾವೇರಿ ತಾಲೂಕಾ ಆಡಳಿತದಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೊಟ್ಟಿಲನ್ನು ತೂಗುವಕೈ ದೇಶವನ್ನು ಆಳಬಲ್ಲದು ಎಂದು ತೋರಿಸಿದ್ದಾರೆ. ಹಾಗಾಗಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹೇಳಲಾಗುತ್ತದೆ ಎಂದರು. ಮಹಿಳೆ ತಾಳ್ಮೆ, ಸಹನೆ, ಜಾಣ್ಮೆ, ವಿಭಿನ್ನ ಆಲೋಚನೆ ಶಕ್ತಿಹೊಂದಿದ್ದಾಳೆ. ಅವಕಾಶ ವಂಚಿತ ಮಹಿಳೆಯರನ್ನು ಸಮಾಜದ ಮುಖ್ಯದ ವಾಹಿನಿಗೆ ತರಲು ಸರ್ಕಾರ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಸರ್ಕಾರದ ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಾವೇರಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್‌ಪಿ ಶ್ರೀಮತಿ ಪ್ರಜ್ಞಾ ಆನಂದ ಅವರು ಮಾತನಾಡಿ, ಮಹಿಳೆ ಗಂಡ, ಮನೆ ಹಾಗೂ ಮಕ್ಕಳ ಬೇಕು-ಬೇಡಗಳ ಬಗ್ಗೆ ಕಾಳಜಿ ವಹಿಸುತ್ತಾಳೆ. ಆದರೆ ತನ್ನ ಬಗ್ಗೆ ತಾನು ಗಮನ ನೀಡುವುದಿಲ್ಲ. ಮೊದಲು ತನ್ನನ್ನು ತಾನು ಪ್ರೀತಿಸಬೇಕು. ಎಲ್ಲರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಮಹಿಳೆ ಮೊದಲು ತಾನು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಸದೃಢವಾಗಿರಬೇಕು ಎಂಬುದನ್ನು ಅರಿತುಕೊಳ್ಳಬೇಕು. ಮಹಿಳೆ ಶ್ರೇಷ್ಠಳಾಗಿದ್ದಾಳೆ, ನಾನೇ ಸುಂದರ, ಉತ್ತಮ ಹಾಗೂ ಬಲಶಾಲಿ ಎಂದು ಭಾವಿಸಿಕೊಳ್ಳಬೇಕು, ಯಾರಿಗೂ ಹೊಲಿಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ಇಂದು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ಇತರೆ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಎಲ್ಲ ಮಾಹಿತಿಯನ್ನು ಸಾಮಾಜಿಕ ಜಾಲಣದಲ್ಲಿ ಅಪ್‌ಲೋಡ್ ಮಾಡಬಾರದು. ಗೌಪ್ಯತೆ ಕಾಪಾಡಿಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯಿಂದ ದೂರ ಇರಲು ತಿಳುವಳಿಕೆ ನೀಡಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್ ಅವರು ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಮಹಿಳೆ ತನ್ನ ಸಂಸಾರದ ಏಳ್ಗೆಗೆ ತನ್ನ ಜೀವನ ಮೀಸಲಿಡುತ್ತಾಳೆ. ಜಗತ್ತಿಗೆ ಉತ್ತಮ ವ್ಯಕ್ತಿಗಳನ್ನು ನೀಡುವ ಶಕ್ತಿ ಮಹಿಳೆಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನ ಹಕ್ಕು ನೀಡಲು ಹಾಗೂ ಶಿಕ್ಷಣ ನೀಡಲು ರಾಜಾರಾಂ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ, ಅಕ್ಕಮಹಾದೇವಿ, ಸಾವಿತ್ರಿಬಾಯಿ ಪುಲೆ ಸೇರಿದಂತೆ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ ಅವರು ಸಂವಿಧಾನದನಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಮಹಿಳೆಯರಿಗೆ ಎಲ್ಲ ರಂಗದಲ್ಲಿ ಸಮಾನ ಅವಕಾಶ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಶೇ.53 ರಷ್ಟು ಮಹಿಳಾ ಉದ್ಯೋಗಿಗಳಿರುವುದು ಸಂತಸದ ಸಂಗತಿಯಾಗಿದೆ. ಸಮಸ್ಯೆಗಳನ್ನು ದಾಟಿ ಬರುವ ಧೈರ್ಯ ಹಾಗೂ ಶಕ್ತಿಯ ಗುಣ ಮಹಿಳೆಯರಲ್ಲಿದೆ. ಮಹಿಳೆಯರು ಸರ್ಕಾರದ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.
ಕೇಕ್ ಕತ್ತರಿಸಿ ಸಂಭ್ರಮಾಚರಣೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಅಧಿಕಾರಿಗಳು ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಸುವ ಮೂಲಕ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಸಿ ನೆಡುವ ಕಾರ್ಯಕ್ರಮ: ಕಾರ್ಯಕ್ರಮಕ್ಕೂ ಮೊದಲು ತಹಶೀಲ್ದಾರ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ್ ಎಲ್ ಅವರು ಸಸಿ ನೆಟ್ಟರು.
ಕಾರ್ಯಕ್ರಮ ಉಪ ವಿಭಾಗಾಧಿಕಾರಿ ಚೆನ್ನಪ್ಪ, ಅಬಕಾರಿ ಉಪ ಆಯುಕ್ತರಾದ ಶೈಲಜಾ, ಪಿಎಸ್‌ಐ ಭಾರತಿ, ಹಾವೇರಿ ತಹಶೀಲ್ದಾರ ಶರಣಮ್ಮ ಕಾರಿ, ರಟ್ಟಿಹಳ್ಳಿ ತಹಶೀಲ್ದಾರ ಶ್ರೇತಾ, ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕಾಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶೈಲಜಾ ಕುರಹಟ್ಟಿ, ಪ್ರೇಮಕ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೀತಾ ಪೂಜಾರ ಸ್ವಾಗತಿಸಿದರು. ಅನ್ನಪೂರ್ಣ ನವಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.