ತಾಳಮದ್ದಲೆಗೆ ಅದರದ್ದೇ ಆದ ವೈಲಕ್ಷಣಗಳಿವೆ

ಲೋಕದರ್ಶನ ವರದಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ತಾಳಮದ್ದಲೆಗೆ ಅದರದ್ದೇ ಆದ ವೈಲಕ್ಷಣಗಳಿವೆ. ಇಲ್ಲಿಯ ಅರ್ಥಧಾರಿಗಳು ಆಂಗಿಕ ಅಭಿನಯದೊಂದಿಗೆ ಪ್ರಸಂಗದ ಚೌಕಟ್ಟಿನಲ್ಲಿಯೇ ಅರ್ಥ ಹೇಳುತ್ತಾರೆ. 

   ದಕ್ಷಿಣ ಕನ್ನಡದಂತೆ ಅರ್ಥದ ಹೊರಚಾಚುವಿಕೆ ಇಲ್ಲಿ ಅಪರೂಪ. ಹಿಂದೆ ಧಾಮರ್ಿಕ ಕಾರ್ಯಕ್ರಮದಲ್ಲಿ ಜಾಗರಣೆಯ ಸಂದರ್ಭದಲ್ಲಿ ತಾಳಮದ್ದಲೆ ಮಾಡುವ ಪರಂಪರೆಯಿತ್ತು. ಯಕ್ಷಗಾನ ಕಲಾವಿದರನ್ನು ನಟರು ಎಂದರೆ ತಾಳಮದ್ದಲೆಯಲ್ಲಿ ಅರ್ಥಧಾರಿಗಳು ಎನ್ನುತ್ತಾರೆ. ಇಂದು ವೈದ್ಯರು, ಪ್ರಾಧ್ಯಾಪಕರು, ಹರಿಕಥಾದಾಸರು, ತಾಳಮದ್ದಲೆಯ ಕ್ಷೇತ್ರಕ್ಕೆ ಬಂದದ್ದರಿಂದ ಅದರ ವ್ಯಾಪ್ತಿ ವಿಸ್ತರವಾಗಿದೆ ಎಂದು ಹೊನ್ನಾವರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗರಾಜ ಹೆಗಡೆ ಅಪಗಾಲ ಅಭಿಪ್ರ್ರಾಯಪಟ್ಟರು.

   ಅವರು ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪರಂಪರೆಕೂಟ ಮತ್ತು ಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ 'ಉತ್ತರ ಕನ್ನಡ ಜಿಲ್ಲೆಯ ತಾಳಮದ್ದಲೆ ಪರಂಪರೆ' ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. 

  ಕನ್ನಡದ ಒಂದು ಅಪ್ರತಿಮವಾದ ಮೌಖಿಕ ಪರಂಪರೆಯಾದ ತಾಳಮದ್ದಲೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಇದರಲ್ಲಿನ ವಿಸ್ತಾರವಾದ ವಾಙ್ಮಯ ಪ್ರಪಂಚವನ್ನು ವಿಶಿಷ್ಠವಾಗಿ ಬಳಸಿಕೊಂಡು ತಾತ್ವಿಕ ಚಿಂತನೆಯನ್ನು ಪಡೆದುಕೊಳ್ಳಬೇಕು. ಅರ್ಥದಿಂದ ತತ್ವಸಿದ್ದಾಂತದ ಕಡೆಗೆ ಸಾಗಿದಾಗ ಮನಸ್ಸು ಬಿಡುಗಡೆಹೊಂದುತ್ತದೆ. ಯಕ್ಷಗಾನ ಕಲಾವಿದರಂತೆ ತಾಳಮದ್ದಲೆ ಅರ್ಥಧಾರಿಗಳಿಗೂ ಪ್ರಚಾರ ಮತ್ತು ಪ್ರಶಸ್ತಿಗಳು ಸಿಗಬೇಕು. ಪ್ರದರ್ಶನ, ಪ್ರಯೋಗಕಲೆಯಾದ ತಾಳಮದ್ದಲೆಗೆ ಜನರ ಕೊರತೆಯಿದೆ. ಕೇಳುವ ಪ್ರವೃತ್ತಿಯಿಂದ ಜನ ದೂರವಾಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು. 

  ಪರಂಪರೆಕೂಟದ ಸಂಚಾಲಕರಾದ ಪ್ರೊ. ಜಿ. ಎಸ್. ಹೆಗಡೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ವಿ. ಎಂ. ಭಂಡಾರಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಆರ್. ನಾಯಕ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. 

  ಸಭಾ ಕಾರ್ಯಕ್ರಮದ ನಂತರದಲ್ಲಿ 'ಮಾಯಾಮೃಗ' ಎಂಬ ತಾಳಮದ್ದಲೆ ನಡೆಯಿತು. ವಿಶೇಷವಾಗಿ ಗಂಡುಕಲೆಯಾದ ಯಕ್ಷಗಾನ ತಾಳಮದ್ದಲೆಯಲ್ಲಿ ಮಾಳ್ಕೋಡಿನ ಯಕ್ಷಗಾನ ಕಲಾವಿದರಾದ ಶ್ರೀ ಉದಯ ಹೆಗಡೆ ಅವರ ಮಕ್ಕಳಾದ ಕುಮಾರಿ ಚಿಂತನಾ ಹೆಗಡೆ ಮತ್ತು ಕುಮಾರ ಚಿನ್ಮಯ ಹೆಗಡೆ ಸುಶ್ರಾವ್ಯವಾಗಿ ಭಾಗವತಿಕೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.  ಮದ್ದಲೆ ವಾದಕರಾಗಿ ಪಿ. ಕೆ. ಹೆಗಡೆ ಹರಿಕೇರಿ ಸಹಕರಿಸಿದರು. ಡಾ. ಎಂ.ಆರ್.ನಾಯಕ, ಪ್ರೊ. ಜಿ. ಎಸ್. ಹೆಗಡೆ, ಪ್ರೊ. ಎಂ. ಜಿ. ಹೆಗಡೆ, ಪ್ರೊ. ನಾಗರಾಜ ಹೆಗಡೆ ಅಪಗಾಲ, ಪ್ರೊ. ಶ್ರೀಧರ ಹೆಬ್ಬಾರ, ಪ್ರೊ. ಪ್ರಶಾಂತ ಮೂಡಲಮನೆ ಅರ್ಥಧಾರಿಗಳಾಗಿ ತಾಳಮದ್ದಲೆ ನಡೆಸಿಕೊಟ್ಟರು.