ಸಾಹಿತ್ಯ ಸಂಪರ್ಕವಿಲ್ಲದ ಸಂಗೀತದ ಆಸ್ವಾದನೆ ಕಡಿಮೆ ಆಗುತ್ತಿದೆ : ಡಾ.ಡಿ.ವಿ.ಪರಮಶಿವಮೂರ್ತಿ

The enjoyment of music without lyrical connection is decreasing : Dr. D. V. Paramashivamurthy

ಸಾಹಿತ್ಯ ಸಂಪರ್ಕವಿಲ್ಲದ ಸಂಗೀತದ ಆಸ್ವಾದನೆ ಕಡಿಮೆ ಆಗುತ್ತಿದೆ : ಡಾ.ಡಿ.ವಿ.ಪರಮಶಿವಮೂರ್ತಿ  

ಹಂಪಿ 30: 4,75,000 ಕೀರ್ತನೆಗಳನ್ನು ಬರೆದಿರುವ ಶ್ರೇಷ್ಠರಾದ ಪುರಂದರದಾಸರು ಹಗಲೆಲ್ಲ ಭಿಕ್ಷಾಟನೆ ಮಾಡುತ್ತಿದ್ದರು. ರಾತ್ರಿ ಸರಸ್ವತಿ ದೇವಿಯ ಅನುಸಂಧಾನ ಮಾಡಿಕೊಂಡು ಸಂಗೀತ ಶಾಸ್ತ್ರ ಬರೆಯುತ್ತಿದ್ದರು ಎಂದು ಬಿಳಿಕೆರೆ ಬಿ.ಎಸ್‌.ಗಂಗಾಧರ ಆಚಾರ್, ಪ್ರಾಂಶುಪಾಲರು ಮತ್ತು ಕಥಾಕೀರ್ತನಕಾರರೂ, ಸರ್ಕಾರಿ ಪದವಿಪೂರ್ವ ಕಾಲೇಜು, ಗಂಧನಹಳ್ಳಿ, ಮೈಸೂರು ಇವರು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಆಯೋಜಿಸಿದ್ದ 30ನೇ ಜನವರಿ 2025ರಂದು ಸಂಗೀತ ಮತ್ತು ನೃತ್ಯ ವಿಭಾಗ ಮತ್ತು ಪುರಂದರದಾಸ ಅಧ್ಯಯನ ಪೀಠದ ಸಹಯೋಗದಲ್ಲಿ ಪುರಂದರದಾಸರ 461ನೇ ಆರಾಧನೆಯ ನಿಮಿತ್ತ ಪುರಂದರದಾಸರ ಕೀರ್ತನೆಗಳಲ್ಲಿ ಭಕ್ತಿ ಮತ್ತು ಸಂಗೀತ (ಉಪನ್ಯಾಸ, ಕೀರ್ತನ ಮತ್ತು ವ್ಯಾಖ್ಯಾನ) ವಿಶೇಷ ಉಪನ್ಯಾಸ ಹಾಗೂ ಕೀರ್ತನ ಗಾಯನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.  

ಪುರಂದರದಾಸರ ಕಾಲದ ಜನಜೀವನಕ್ಕೆ ನೆಮ್ಮದಿ ಬೇಕಾಗಿತ್ತು. ಅದಕ್ಕಾಗಿ ಜನರ ಜೀವನ ಭಕ್ತಿಯ ಪರಕಾಷ್ಠತೆ ತಲುಪಿತ್ತು. ಭಕ್ತಿಯೆಂದರೆ ಅನುರಾಗ, ಭಕ್ತಿಯು ಅವಿರೋಧವಾಗಿ ಆತ್ಮಾನಂದ ಕೊಡುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಕೀರ್ತನೆಯನ್ನು ಪುರಂದರದಾಸರು ಜೀವನಕ್ಕೆ ಹೋಲಿಸಿದ್ದಾರೆ. ಪರಾಕು ಮಾಡದೇ ಪರಾಂಬರಿಸು ಎನ್ನ ಅಪರಾಧಗಳ ಕ್ಷಮಿಸು ಎಂದು ಬೇಡಿದ್ದಾರೆ. ಅವರ ಕೀರ್ತನೆಗಳಲ್ಲಿ ಮಹಿಳೆಗೆ ಗೌರವವಿದೆ, ಬುದ್ಧಿಮಾತುಗಳಿವೆ. ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಎಂಬ ಕೀರ್ತನೆಯು ಇಂದಿಗೂ ಬಹಳ ಪ್ರಸ್ತುತವಾಗಿದೆ.  

ಮದುವೆಯಾದ ಕೆಲವೇ ದಿನಗಳಲ್ಲಿ ಡೈವೋರ​‍್ಸ‌ ತೆಗೆದುಕೊಳ್ಳುವ ಮನಃಸ್ಥಿತಿಗೆ ಕೂಡಿಬಾಳಬೇಕೆಂಬ ಬುದ್ಧಿಮಾತುಗಳು ಕಣ್ಣು ತೆರೆಸುತ್ತವೆ. ಹೆತ್ತ ತಂದೆತಾಯಿಗಳ ನೋಯಿಸಿ, ನಿತ್ಯ ದಾನವ ಮಾಡಿದರೆ ಏನು ಫಲ ಎಂದು ಹಾಡಿರುವ ಅವರ ಕೀರ್ತನೆಯು ವೃದ್ಧ ತಂದೆತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸಬೇಕೆಂಬ ಇವತ್ತಿನ ಮನೋಧರ್ಮವನ್ನು ಟೀಕಿಸುತ್ತದೆ, ಎಚ್ಚರಿಸುತ್ತದೆ. ಹೀಗೆ ಎಲ್ಲ ಆಯಾಮಗಳಲ್ಲಿ ಕೀರ್ತನೆಗಳ ಮೂಲಕ ಪುರಂದರದಾಸರು ಸಮಾಜದ ಮನಸ್ಸುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದು ಬಿಳಿಕೆರೆ ಗಂಗಾಧರ ಅವರು ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ಯುವ ಸಂಶೋಧಕರಿಗೆ ತಿಳಿಸಿಕೊಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಂಬೂರಿಯನ್ನು ಮೀಟುವ ಮೂಲಕ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಪುರಂದರದಾಸರಿಗೂ, ಕನ್ನಡ ವಿಶ್ವವಿದ್ಯಾಲಯಕ್ಕೂ ಎರಡು ರೀತಿಯ ಸಂಬಂಧವಿದೆ. ಪುರಂದರದಾಸರು ಓಡಾಡಿದ ಹಂಪಿಯ ನೆಲದ ಪಕ್ಕದಲ್ಲಿ ಕನ್ನಡ ವಿಶ್ವವಿದ್ಯಾಲಯ ನೆಲೆಗೊಂಡಿದೆ. ಪುರಂದರದಾಸರು ಬರಿಗೈ ದಾಸರಾಗಿದ್ದರು.  

ಕನ್ನಡ ವಿಶ್ವವಿದ್ಯಾಲಯವು ಬರಿಗೈ ಆಗಿದೆ ಎಂದು ಮಾರ್ಮಿಕವಾಗಿ ನುಡಿಯುತ್ತ, ಆರ್ಟಿಫಿಷಿಯಲ್ ಇಂಟಿಲಿಜೆನ್ಸ್‌ನ ಇಂದಿನ ಕಾಲದಲ್ಲಿ ಪುರಂದರದಾಸರನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದರೆ ಅವರ ಜೀವನದ, ಕೀರ್ತನೆಗಳ, ಮಹತ್ವ ಮತ್ತು ಪ್ರಸ್ತುತತೆ ತಿಳಿಯುತ್ತದೆ. ವಚನ ಸಾಹಿತ್ಯ ಪರಂಪರೆಯು ಹರನನ್ನು ಶ್ರೇಷ್ಠ ಎಂದರೆ ದಾಸಸಾಹಿತ್ಯ ಪರಂಪರೆಯು ಹರಿಯನ್ನು ಶ್ರೇಷ್ಠನನ್ನಾಗಿಸಿದೆ.  

ಎರಡು ಪರಂಪರೆಗಳು ಭಕ್ತಿಯ ತಳಹದಿಯ ಮೇಲಿದ್ದರೂ ವಚನ ಸಾಹಿತ್ಯವು ವೈಚಾರಿಕತೆಗೆ ಪ್ರಾಧಾನ್ಯತೆ ನೀಡಿದರೆ, ದಾಸಸಾಹಿತ್ಯವು ಆತ್ಮಾನುಸಂಧಾನಕ್ಕೆ ಪ್ರಾಧಾನ್ಯತೆ ನೀಡುತ್ತದೆ. ಜನಸಾಮಾನ್ಯರಲ್ಲಿ ದಾಸಸಾಹಿತ್ಯವು ಜನಪ್ರಿಯವಾಗಿದೆ. ನಿಜ ಬದುಕಿನ ದರ್ಶನ ಮಾಡಿಸುವುದೇ ದಾಸಸಾಹಿತ್ಯ. ಮನುಷ್ಯನ ಹೃದಯ ಮೃದು ಮಾಡುವುದೇ ಕನ್ನಡ ಸಾಹಿತ್ಯ ಪರಂಪರೆಯ ಹೂರಣ ಎಂದು ತಿಳಿಸುತ್ತ, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನು ಪುರಂದರದಾಸರಿಗೆ ದಾನವಾಗಿ ಕೊಟ್ಟ ತಾಮ್ರದ ಶಾಸನ ಕಮಲಾಪುರದ ಮ್ಯೂಸಿಯಂನಲ್ಲಿದೆ ಎಂದು ಮಾಹಿತಿ ನೀಡಿದರು. 

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಇವತ್ತಿನ ಡಿ.ಜೆ ಹಾಡುಗಳಿಗೆ ಕುಣಿಯುವ ಸಂಗೀತ ಯುಗದಲ್ಲಿ ಸಂಗೀತಮನಸ್ಸು ಮತ್ತು ಮನೋಧರ್ಮ ರೂಪಿಸಿ ಮನಸ್ಸನ್ನು ಕಟ್ಟಿಕೊಡಬೇಕು. ಪುರಂದರದಾಸರು ರಾಗಗಳ ಜಾತಿ, ಸ್ವರಗಳ ಜಾತಿ, ತಾಳ, ಲಯಗಳ ಮೇಲೆ ಕೆಲಸ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಲಕ್ಷ ಮತ್ತು ಲಕ್ಷಣ ಗೀತೆಗಳನ್ನು ಬರೆಯುತ್ತಾರೆ. ರೂಪಕ ಮತ್ತು ಝಂಪೆ ತಾಳಗಳು ಪುರಂದರದಾಸರಿಗೆ ಬಹಳ ಪ್ರಿಯವಾಗಿತ್ತು. ಈ ಎಲ್ಲ ಹಿನ್ನಲೆಯಲ್ಲಿ ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯಲಾಗಿದೆ ಎಂದು ತಿಳಿಸಿದರು. 

ಪುರಂದರದಾಸ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಸ್‌.ಆರ್‌. ಚನ್ನವೀರ​‍್ಪ ಸ್ವಾಗತಿಸಿದರು, ಸಂಶೋಧನಾ ವಿಧ್ಯಾರ್ಥಿಗಳಾದ ಮಲ್ಲಿಕಾರ್ಜುನ ನಿರೂಪಿಸಿದರು, ಪ್ರವೀಣ್‌ಕುಮಾರ್ ವಂದಿಸಿದರು. ಕಾಗದ ಬಂದಿದೆ ನಮ್ಮ ಕಮಲನಾಭನದು ಎಂಬ ಕೀರ್ತನೆಯ ಮೂಲಕ ಅಕ್ಷತಾ ಪ್ರಾರ್ಥಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳಾದ ಗುಂಡಿ ಭರತ್, ತನುಜಾ ಕೆ.ಎಸ್‌., ಪೂಜಾರಿ ದುರ್ಗೇಶ್, ಆಸೀಫ್ ಮುಲ್ಲಾ, ದೊಡ್ಡಮನಿ ಜ್ಯೋತಿ ಮೊದಲಾದ ವಿದ್ಯಾರ್ಥಿಗಳು ಪುರಂದರದಾಸರ ಕೀರ್ತನೆಗಳ ಗಾಯನ ನಡೆಸಿಕೊಟ್ಟರು. ವಿದ್ಯಾರ್ಥಿ ಮಧು ಹಾರೋ​‍್ಮನಿಯಂ ಸಾಥಿ ನೀಡಿದರು. ಶ್ರೀ ದೊಡ್ಡಬಸಪ್ಪ, ಶ್ರೀ ಹನುಮಂತಪ್ಪ ತಬಲಾಸಾಥಿಗಳಾಗಿದ್ದರು. 

ಡೀನರಾದ ಡಾ.ಎಫ್‌.ಟಿ.ಹಳ್ಳಿಕೇರಿ, ಡಾ.ಶಿವಾನಂದ ಎಸ್‌.ವಿರಕ್ತಮಠ, ಮಾಹಿತಿಕೇಂದ್ರದ ನಿರ್ದೇಶಕರಾದ ಡಾ.ಡಿ.ಮೀನಾಕ್ಷಿ, ಸಂಗೀತ ವಿಭಾಗದ ಪಂ. ವಿರೂಪಾಕ್ಷಪ್ಪ ಇಟಗಿ, ಡಾ.ತಿಮ್ಮಣ್ಣ ಭೀಮರಾಯ, ಜ್ಯೋತಿ ಉಪಸ್ಥಿತರಿದ್ದರು.