ಬಿಸಿಲು; ಗರ್ಭಿಣಿಯರು ಮಧ್ಯಾಹ್ನ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡದಿರಿ: ಡಿಹೆಚ್‌ಒ ಯಲ್ಲಾ ರಮೇಶ್ ಬಾಬು

Sun; Pregnant women should not venture out of the house during the afternoon: DHO Yalla Ramesh Babu

ಬಿಸಿಲು; ಗರ್ಭಿಣಿಯರು ಮಧ್ಯಾಹ್ನ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡದಿರಿ: ಡಿಹೆಚ್‌ಒ ಯಲ್ಲಾ ರಮೇಶ್ ಬಾಬು 

ಬಳ್ಳಾರಿ 01: ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆಯರು ಮಧ್ಯಾಹ್ನ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡಬಾರದು. ಹೆಚ್ಚಾಗಿ ನೀರು ಕುಡಿಯಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. 

ಮಂಗಳವಾರದಂದು ಕುರುಗೋಡು ತಾಲ್ಲೂಕಿನ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 12 ರಿಂದ 3 ಗಂಟೆ ಅವಧಿಯಲ್ಲಿ ಬಿಸಿಲಿನ ತೀವ್ರತೆಯು ಹೆಚ್ಚು ಕಂಡುಬರುತ್ತಿದ್ದು, ಗರ್ಭಿಣಿಯರು ಮನೆಯಲ್ಲಿಯೇ ಇರುವ ಮೂಲಕ ಆರೋಗ್ಯದ ಕಾಳಜಿಗೆ ಕುಟುಂಬದ ಸದಸ್ಯರು ಸಹ ಮತುವರ್ಜಿ ವಹಿಸಬೇಕು ಎಂದು ತಿಳಿಸಿದರು. 

ಗರ್ಭಿಣಿ ಮಹಿಳೆಯು ಮಧ್ಯಾಹ್ನದ ಅವಧಿಯಲ್ಲಿ ಮನೆಯಿಂದ ಹೊರಗಡೆ ಕೆಲಸ ಕಾರ್ಯಗಳನ್ನು ಮಾಡಬಾರದು. ದೇಹದಲ್ಲಿ ನೀರಿನಾಂಶ ಕೊರತೆಯಿಂದ ಆಗಬಹುದಾದ ಅನಾನುಕೂಲತೆಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದರು. 

ಬೇಸಿಗೆ ಹಿನ್ನಲೆಯಲ್ಲಿ ಬಾಣಂತಿಯರು ಸಹ ನವಜಾತ ಶಿಶುವಿಗೆ ತಾಯಿ ಹಾಲು ನೀಡಬೇಕು. ಬೇರೆ ಏನನ್ನೂ ಕೊಡಬಾರದು. ತಾಯಿ ಹಾಲಿನಲ್ಲಿ ಸಾಕಷ್ಟು ನೀರಿನಾಂಶ ಇರುವುದರಿಂದ ದಿನಕ್ಕೆ ಕನಿಷ್ಟ 10 ರಿಂದ 12 ಬಾರಿ ಅಥವಾ ಮಗು ಅತ್ತಾಗಲೆಲ್ಲಾ ಹಾಲುಣಿಸಬೇಕು ಎಂದು ಸೂಚಿಸಿದರು. 

ಈಗಾಗಲೇ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ನಿರ್ಜಲೀಕರಣ ತಡೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಓ.ಆರ್‌.ಎಸ್‌. ಕಾರ್ನರ್ ಮಾಡಲಾಗಿದ್ದು, ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಓ.ಆರ್‌.ಎಸ್ ದ್ರಾವಣ ಸೇವಿಸುವ ಮೂಲಕ ದೇಹದಲ್ಲಿ ನಿರ್ಜಲೀಕರಣದಿಂದಾಗುವ ಅಪಾಯಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು. 

ಈಗಾಗಲೇ ಬಿಸಿಲಿನ ಶಾಖಾಘಾತದಿಂದ ಸಂಭವಿಸಬಹುದಾದ ತೊಂದರೆಯನ್ನು ತಪ್ಪಿಸಲು ಮತ್ತು ತಕ್ಷಣ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 01 ಬೆಡ್ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 02 ಬೆಡ್ ಕಾಯ್ದಿರಿಸಲಾಗಿದೆ ಎಂದು ಡಿಹೆಚ್‌ಒ ಅವರು ಹೇಳಿದರು. 

ಜಿಲ್ಲೆಯ ಗ್ರಾಮ ಮಟ್ಟದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಲ್ಲಿ ಬಿಸಿಲಿನ ಶಾಖಾಘಾತದ ಚಿಕಿತ್ಸೆಗೆ ಸಂಬಂಧಸಿದಂತೆ ಅಗತ್ಯ ತುರ್ತು ಓಷಧಿಗಳನ್ನು ಕೊರತೆಯಾಗದಂತೆ ದಾಸ್ತಾನು ಇರಿಸಲಾಗಿದೆ ಎಂದರು. 

ಈ ಸಂದರ್ಭದಲ್ಲಿ ತಾರನಾಥ ಆರ್ಯುವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಧರ್, ಆಯುಷ್ ಪ್ರಾಧ್ಯಾಪಕರಾದ ಡಾ.ರಾಜಶೇಖರ್ ಗಾಣಿಗೇರ್, ಡಾ.ಫಣೀಂದ್ರ, ಡಾ.ಕಲ್ಯಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕಚೇರಿ ಅಧೀಕ್ಷಕ ಬಸವರಾಜ್, ಆರೋಗ್ಯ ನೀರೀಕ್ಷಣಾಧಿಕಾರಿ ಕೆ.ವಿರೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶರಣಮ್ಮ, ಸಿದ್ದಮ್ಮ, ಫಾರ್ಮಸಿಸ್ಟ್‌ ಕ್ರಿಷ್ಣಮೂರ್ತಿ, ಆಶಾಕಾರ್ಯಕರ್ತೆ ರಾಧ ಸೇರಿದಂತೆ ತಾಯಂದಿರು ಹಾಗೂ ಸಾರ್ವಜನಿಕರು ಇದ್ದರು.