ಉದ್ಯೋಗ ಖಾತರಿ ಯೋಜನೆಯ ಸಾಫಲ್ಯತೆ : ಕೆರೆಯ ಒಡಲು ಭರ್ತಿ

Success of the employment guarantee scheme:

ವಿಜಯಪುರ 20: ಜಿಲ್ಲೆಯ 13 ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ  ಜನರಿಗೆ ಬೇಸಿಗೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ  ಸತತ ಉದ್ಯೋಗ ಕಲ್ಪಿಸಲಾಗುತ್ತಿದೆ. ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ 2,94,323 ಮಾನವ ದಿನಗಳನ್ನು ಸೃಜನೆ ಮಾಡಿ ಅಂತರ್ಜಲ ಅಭಿವೃದ್ಧಿಗಾಗಿ ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳೆತ್ತುವ ಹಾಗೂ ಅರಣ್ಯೀಕರಣಕ್ಕೆ ಮುಂಗಡ ಗುಂಡಿಗಳು, ಕೃಷಿಹೊಂಡ, ಬದು ನಿರ್ಮಾಣ, ನಾಲಾ-ಹಳ್ಳಗಳಲ್ಲಿ ಮಳೆ ನೀರು ಶೇಖರಣೆ ಆಗಿದೆ. ಮುಂಬರುವ ದಿನಗಳಲ್ಲಿ ವಿವಿಧೆಡೆ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ಆ ಭಾಗದ ರೈತರ ಮೊಗದಲ್ಲಿ ಸಂತಸ ತರಿಸಿದೆ.  

ಕಳೆದ ದಿನಗಳಲ್ಲಿ ಭೀಕರ ಬರ ನೆನಪಿಸುವಂಥ ದಿನಗಳನ್ನು ಕಂಡಿದ್ದ ವಿಜಯಪುರ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಕೆರೆಗಳು, ಬಾವಿಗಳು, ಬೋರ್ವೆಲ್ಗಳು ನೀರಿನ ವರತೆ ಕಡಿಮೆ ಇತ್ತು     ಸ್ವಾಭಾವಿಕ ಸಂಪನ್ಮೂಲಗಳಲ್ಲಿ  ಒಂದಾದ ನೀರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೂ ಅತ್ಯವಶ್ಯಕ   ಜಲವೇ ಜೀವನ ಎಂಬಂತೆ ನೀರಿನ ಬಳಕೆ ಮತ್ತು ಉಳಿತಾಯದಲ್ಲಿ ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಮಳೆ ಆಶ್ರೀತ ಕೃಷಿ ಚಟುವಟಿಕೆಗೆ ನೀರು ಸಂಗ್ರಹಣೆಯು ಪ್ರಮುಖ ಪಾತ್ರವಹಿಸುತ್ತದೆ.   ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳುವುದು ಅಗತ್ಯವಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವ ಹಾಗೂ ಅರಣ್ಯೀಕರಣಕ್ಕೆ ಮುಂಗಡ ಗುಂಡಿಗಳು, ಕೃಷಿಹೊಂಡ, ಬದು ನಿರ್ಮಾಣ, ನಾಲಾ-ಹಳ್ಳಗಳ ಅಭಿವೃದ್ಧಿಪಡಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗಿದೆ.                       ಈ  ಕಾಮಗಾರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಸ್ವಾಗತಾರ್ಹ ಕೆಲಸ ಮಾಡಲಾಗಿದೆ. 

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಉದ್ಯೋಗ ಖಾತರಿ ಯೋಜನೆ             ಕೈ ಹಿಡಿದಿರುವುದು ಒಂದೆಡೆಯಾದರೆ, ಹೂಳೆತ್ತಿದ ಕೆರೆಯಲ್ಲಿ ನೀರು ನಿಂತಿರುವುದು ಸಾರ್ಥಕತೆ ಮೂಡಿಸಿದೆ. ಹೂಳು ತುಂಬಿ ಹೆಚ್ಚು ನೀರು ನಿಲ್ಲದೇ ಇರುವ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಕೂಲಿಕಾರ್ಮಿಕರಿಗೆ ಕೆಲಸ ನೀಡಿ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಗಳಲ್ಲಿ ಮಳೆನೀರು ಸಂಗ್ರಹವಾಗುವಂತೆ ಮಾಡಲಾಗಿದೆ. 

ಕೆರೆಗಳು ಹಾಗೂ ಜಲಮೂಲಗಳು ಒಣಗಿದ್ದರಿಂದ ಸುತ್ತಮುತ್ತಲಿನ ದ್ರಾಕ್ಷಿ ಸೇರಿ ಇತರೆ ತೋಟಗಾರಿಕೆ ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿದ್ದವು. ಆದರೆ ಈಗ ಕೆರೆಗಳು ಭರ್ತಿಯಾಗಿದ್ದರಿಂದ ಸುತ್ತಮುತ್ತಲಿನ ಬಾವಿಗಳು, ಕೊಳವೆ ಬಾವಿಗಳು  ಮರುಪೂರಣ ಆಗಿದ್ದು, ರೈತರ ಆತಂಕ ದೂರವಾಗಿದೆ. ಕೆರೆಗಳಲ್ಲಿ ನೀರು ನಿಂತಿದೆ. ಮಹಾತ್ಮ ಗಾಂಧಿ ನರೇಗಾ ಹೂಳೆತ್ತಿದ್ದರಿಂದ ಆಳ ಹೆಚ್ಚಾಗಿದ್ದು, ನೀರು ಸಂಗ್ರಹಣೆ ಪ್ರಮಾಣವೂ ಹೆಚ್ಚಾಗಿ ಕೆರೆಯ ಸುತ್ತಮುತ್ತಲು ಬತ್ತಿ ಹೋಗಿದ್ದ ಬೋರ್ವೆಲ್, ಬಾವಿಗಳಿಗೆ ನೀರು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ತೋಟಗಾರಿಕೆ ರೈತರಿಗೆ ನೀರಿನ ಕೊರತೆ ನೀಗುತ್ತದೆ. ಗಿಡ ಮರಗಳಿಗೆ ನೀರು ಸಿಕ್ಕು, ನೀರಿಲ್ಲದೇ ಒಣಗುತ್ತಿದ್ದ ಮರಗಳಿಗೂ ಸಹ ನೀರು ಲಭಿಸಿ ಜೀವ ಬಂದಂತಾಗಿದೆ ಹಾಗೂ ಜನಜಾನುವಾರುಗಳಿಗೆ ಜೀವ ಜಲ ಸಿಕ್ಕಿದೆ. ದುಡಿಯುವ ಕೈಗಳಿಗೆ ಕೆಲಸವೂ ಲಭಿಸಿದೆ. 

ಫಲಶೃತಿ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವ ಹಾಗೂ ಅರಣ್ಯೀಕರಣಕ್ಕೆ ಮುಂಗಡ ಗುಂಡಿಗಳು, ಕೃಷಿಹೊಂಡ, ಬದು ನಿರ್ಮಾಣ, ನಾಲಾ/ಹಳ್ಳಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಇದೀಗ ಆರಂಭವಾಗಿರುವ ವರ್ಷಧಾರೆಯಿಂದಾಗಿ ಕೆರೆಗಳು ಬಹುತೇಕ ಮೈದುಂಬಿ ಕಂಗೊಳಿಸುತ್ತಿವೆ. ಗ್ರಾಮಗಳ ಜನ-ಜಾನುವಾರುಗಳಿಗೆ ಆಸರೆಯಾಗಿವೆ. ಸುತ್ತ-ಮುತ್ತಲಿನ ಜಮೀನುಗಳಿಗೆ ಮತ್ತು ಬೋರ್ವೆಲ್ಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲು ಆರಂಭಿಕ ಹೆಜ್ಜೆ ಇಟ್ಟಿದೆ. ಕೆರೆಯ ಅಂಚಿನ ಪ್ರದೇಶದ ರೈತರಿಗೆ ಸಹಕಾರಿಯಾಗಿದೆ. ಮೂಕ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳಿಗೆ ನೀರಿನ ದಾಹ ನೀಗಿಸಿದಂತಾಗಿದೆ, ಸಾರ್ವಜನಿಕರು ಕೃಷಿ ಚಟುವಟಿಕೆಗಳಿಗೆ ಕೆರೆಯ ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಮತ್ತು ಅಧಿಕ ಆದಾಯ ಪಡೆಯಲು ಸಹಾಯಕವಾಗುತ್ತದೆ. 

ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರಿಶ್ಯಾಳ ಕೆರೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳು ತೆಗೆಯಲಾಗಿದ್ದು, ತಗ್ಗುಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ. ಕೆರೆ ಅಂಗಳದಲ್ಲಿ ಸುಮಾರು 3ಅಡಿ ಉದ್ದ, 3 ಅಡಿ ಅಗಲ, .6 ಅಡಿ ಆಳದ ಒಟ್ಟು 171 ತಗ್ಗುಗಳನ್ನು ನಿರ್ಮಿಸಲಾಗಿದೆ. ಪ್ರತಿ ತಗ್ಗು 5400  ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುತ್ತದೆ. ಒಟ್ಟು 171 ತಗ್ಗುಗಳಲ್ಲಿ 9,23,400 ಲೀಟರ್ ನೀರು ಸಂಗ್ರಹವಾಗಿದೆ. ಈ ಕೆರೆ ಸುತ್ತಲೂ ಹೆಬ್ಬಾಳ ಗ್ರಾಮದ ವ್ಯಾಪ್ತಿಗೆ ಅಂದಾಜು  100 ಎಕರೆ ಜಮೀನು ಇದ್ದು, 16 ಬೊರ್ ವೆಲ್  ಹಾಗೂ 25 ಬಾವಿಗಳಿವೆ. ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಕಾಮಗಾರಿಗೆ ರೂ.38139 ಲಕ್ಷ ಕೂಲಿ ಹಣ ಹಾಗೂ ಸಾಮಗ್ರಿ ವೆಚ್ಚವಾಗಿ 108356 ಸೇರಿ ಒಟ್ಟು 497495 ವೆಚ್ಚ ಮಾಡಲಾಗಿದೆ. ಇದಕ್ಕಾಗಿ 105 ಜನ ಕೂಲಿಕಾರರು ಕೆಲಸ ಮಾಡಿ ಒಟ್ಟು1115 ಮಾನವ ದಿನಗಳನ್ನು ಸೃಜನೆ ಮಾಡಿದ್ದಾರೆ. 

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಜೊತೆಗೆ ನೀರಿನ ಸಂರಕ್ಷಣೆಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ಯೋಜನೆಯಡಿ  ಈ ವರ್ಷ ಹೂಳೆತ್ತಿದ ಕೆರೆಗಳಲ್ಲಿ ಈಗ ಮಳೆ ನೀರು ಸಂಗ್ರಹವಾಗಿದೆ. ಅಂತರ್ಜಲ ಹೆಚ್ಚಳಕ್ಕೆ ವರ್ಷಧಾರೆಯು ಆರಂಭಿಕ ಹೆಜ್ಜೆ ಇಟ್ಟಿದೆ. ಭೂಮಂಡಲದ ಸಕಲ ಜೀವ-ಸಸ್ಯ ರಾಶಿಗಳಿಗೆ ನೀರೇ ಮೂಲಾಧಾರ. ಅನಾದಿ ಕಾಲದಿಂದ ನಾಗರಿಕತೆಗಳು ಬೆಳೆದಂತೆ ನೀರಿನ ಜೊತೆ ಮಾನವನ ನಿಕಟ ಸಂಬಂಧ ಬೆಳೆಯುತ್ತಲೇ ಬಂದಿದೆ. ಮಳೆ ಆಶ್ರಯದ ಕೃಷಿಗೆ ಮಳೆಯ ವೈಫಲ್ಯತೆ ಕಂಡಾಗ ಕೆರೆ ಕಟ್ಟೆಗಳೆ ಆಶ್ರಯವಾಗಿವೆ ಎಂದು  ವಿಜಯಪುರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.