ದುಶ್ಚಟಗಳಿಂದ ಸಂಸಾರ ಬೀದಿಪಾಲಾದಿತು: ಸುಹೇಲ್

ಲೋಕದರ್ಶನ ವರದಿ 

ಅಂಕೋಲಾ 23: ಸರಾಯಿ ಮತ್ತಿತರ ದುಶ್ಚಟಗಳಿಂದ ಸಂಸಾರ ಬೀದಿ ಪಾಲಾಗುವ ಸಾಧ್ಯತೆಯಿದ್ದು, ನಾಗರಿ ಕರು ಜಾಗೃತರಾಗಿ ನೆಮ್ಮದಿಯ ಜೀವನ ನಡೆಸುವಂತಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುಹೇಲ್ ಅಹಮ್ಮದ ಎಸ್.ಕುನ್ನಿಭಾವಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಪೊಲೀಸ್ ಠಾಣೆಯ ಆವಾರಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕಾನೂನು ತಿಳುವಳಿಕೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿ, ಪೊಲೀಸ್ ಅಧಿಕಾರಿಗಳಾದ ಬಿ.ಪ್ರಮೋದಕುಮಾರ, ಮತ್ತು ಶ್ರೀಧರ ಎಸ್.ಆರ್ ಅವರು ಸಾಮಾಜಿಕ ಕಳಕಳಿಯಿಂದ ಬಡಗೇರಿಯಂತಹ ಗ್ರಾಮೀಣ ಭಾಗದಲ್ಲಿ ಕಳ್ಳ ಬಟ್ಟಿ ಸರಾಯಿ ತಯಾರಿಕೆ ಮತ್ತು ಅಕ್ರಮ ಸರಾಯಿ ಮಾರಾಟದ ವಿರುದ್ಧ ಸ್ಥಳೀಯ ಬೇಟೆಬೀರ ಯುವಕ ಸಂಘ ಮತ್ತು ನಾಗರಿಕರ ಸಹಕಾರದಲ್ಲಿ ಕಾರ್ಯ ಪ್ರವೃತ್ತರಾಗಿ 'ಸರಾಯಿ ಮುಕ್ತ ಗ್ರಾಮ' ಮಾಡ ಹೊರಟಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮತ್ತು ಪೊಲೀಸರಿಗೆ ಸೂಚಿಸಿದರು.   

ಪಿ.ಎಸ್.ಐ. ಶ್ರೀಧರ ಮಾತನಾಡಿ, ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿ ತನ್ನೂರಿನಲ್ಲಿ ಈ ಹಿಂದಿನಿಂದಲೂ ಸರಾಯಿ ಮಾರಾಟದ ವಿರುದ್ಧ ಧ್ವನಿಯೆತ್ತಿದ್ದು, ನ್ಯಾಯವಾದಿ ಉಮೇಶ ನಾಯ್ಕ, ಅಬಕಾರಿ ಇಲಾಖೆ ಮತ್ತು ಸ್ಥಳೀಯ ಯುವಕ ಸಂಘ ಹಾಗೂ ನಾಗರಿಕರ ಜಾಗೃತ ಪ್ರಜ್ಞೆಯಲ್ಲಿ ಅಕ್ರಮ ಸರಾಯಿ ವಿರುದ್ಧ ಜನಾಂದೋಲನ ನಡೆಸಿ ಯಶಸ್ಸಿನತ್ತ ನಡೆಯುತ್ತಿದ್ದೇವೆ ಎಂದರು. 

ವೇದಿಕೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಲಾದ್, ಪಿ.ಎಸ್. ಐ.ಎ.ವೈ.ಕಾಂಬಳೆ ಉಪಸ್ಥಿತರಿದ್ದರು. ನ್ಯಾಯವಾದಿ ಉಮೇಶ ನಾಯ್ಕ ಸ್ವಾಗತಿಸಿದರು. ಪತ್ರಕರ್ತ ಸುಭಾಸ ಕಾರೇಬೈಲ್ ನಿರೂಪಿಸಿದರು. ಬಡಗೇರಿಯ ಯುವಕ ಸಂಘದ ಸದಸ್ಯರು, ಊರ ನಾಗರಿಕರು, ನ್ಯಾಯ ವಾದಿಗಳ ಸಂಘದ ಸದಸ್ಯರು, ಪೊಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.