ಮನುಕುಲದ ದಾರ್ಶನಿಕರಾದ ಗಾಂಧೀಜಿಯವರು ಸದಾ ವಿಸ್ಮಯವಾಗಿಯೇ ಕಾಣುತ್ತಾರೆ: ಕಾಂತೇಶ ಅಂಬಿಗೇರ
ಹಾವೇರಿ 30: ಗಾಂಧೀಜಿ ಕೇವಲ ಉಪದೇಶ ಮಾಡದೇ ಸತ್ಯ, ಅಹಿಂಸೆಯ ದಾರಿಯಲ್ಲಿ ಮೌಲ್ಯಯುತ ಜೀವನವನ್ನು ಸಾಧಿಸಿದರು. ಅವರ ಜೀವನವೇ ಅತ್ಯಮೂಲ್ಯ ಸಂದೇಶವಾಗಿದೆ. ಮನುಕುಲದ ದಾರ್ಶನಿಕರಾದ ಗಾಂಧೀಜಿಯವರು ಸದಾ ವಿಸ್ಮಯವಾಗಿಯೇ ಕಾಣುತ್ತಾರೆ ಎಂದು ಸಾಹಿತಿ ಕಾಂತೇಶ ಅಂಬಿಗೇರ ಅಭಿಪ್ರಾಯಪಟ್ಟರು.
ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಸೌಹಾರ್ದ ಕರ್ನಾಟಕ ಹಾವೇರಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಸ್ಮರಣಾರ್ಥವಾಗಿ ಬೀದಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕವಿತೆ ವಾಚಿಸಿ ಮಾತನಾಡಿದರು.
ಇತರರ ಖುಷಿಯಲ್ಲಿ ನಮ್ಮ ಖುಷಿ ಕಾಣಬೇಕು, ಯಾವುದೇ ವೃತ್ತಿಯಾಗಲಿ ಕನಿಷ್ಠ ಎಂಬುದಿಲ್ಲ ಎಲ್ಲವೂ ಶ್ರೇಷ್ಠ ಹಾಗೂ ಕರಕುಶಲತೆಯು ಎಲ್ಲ ಕಾರ್ಯಕ್ಕಿಂತ ಪರಮಶ್ರೇಷ್ಠವಾದುದು ಎಂಬ ಗಾಂಧೀಜಿಯವರ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಬೀದಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ ಗಾಂಧೀಜಿಯವರ ಸಂದೇಶದಂತೆ ಪ್ರಸ್ತುತ ವಿದ್ಯಾರ್ಥಿ, ಯುವಜನರು ತಮ್ಮ ಬದುಕಿನಲ್ಲಿ ಶಾಂತಿ ಸೌಹಾರ್ದತೆ ಸಹಬಾಳ್ವೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹುತಾತ್ಮ ದಿನದ ಸಂಕಲ್ಪ ಬೋಧಿಸಿ ಮಾತನಾಡಿ, ಮಾನವಕುಲಕ್ಕೆ ಕಂಟಕವಾಗಿರುವ ಎಲ್ಲ ತರಹದ ಧಾರ್ಮಿಕ ಮೂಲಭೂತವಾದವನ್ನು ಕೊನೆಗಾಣಿಸಬೇಕು. ಭಾರತದ ಅಂತಃಸತ್ವವಾದ ಬಹುತ್ವ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಬೇಕಿದೆ ಎಂದರು.
ಸಾಮರಸ್ಯ,ಸೌಹಾರ್ದತೆ, ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಗಟ್ಟಿಗೊಳಿಸಲು ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸುವ ಜೊತೆಯಲ್ಲಿ ಸಂವಿಧಾನಾತ್ಮಕ ಆಶಯಗಳ ಅನುಷ್ಠಾನಕ್ಕೆ ಬದ್ದತೆಯಿಂದ ಪ್ರತಿಯೋರ್ವರೂ ಶ್ರಮಿಸಬೇಕು ಎಂದರು.ಬೀದಿ ಕವಿಗೋಷ್ಠಿಯಲ್ಲಿ ನೇತ್ರಾ ಅಂಗಡಿ, ಜುಬೇದಾ ನಾಯಕ, ನಾರಾಯಣ ಕಾಳೆ, ಎ.ಎಂ ಪಟವೇಗಾರ,ಗಂಗಯ್ಯ ಕುಲಕರ್ಣಿ, ರುದ್ರೇಶ ಮೊಟೆಬೆನ್ನೂರು, ಬಿ.ಡಿ ನಾಯಕ್, ಧನುಷ್ ದೊಡ್ಮನಿ ಗಾಂಧೀಜಿಯವರ ಕುರಿತು ಚನ್ನವೀರ ಕಣವಿ, ಡಿಎಸ್ ಕಣವಿ ಸೇರಿದಂತೆ ಹಿರಿಯ ಕವಿಗಳು ಬರೆದ ಕವಿತೆಗಳನ್ನು ವಾಚಿಸಿದರು. ಕಲಾವಿದ ಶಂಕರ ತುಮ್ಮಣ್ಣನವರ 'ದಾರಿ ಯಾವುದಯ್ಯ'ನಾಟಕವನ್ನು ಏಕಪಾತ್ರಾಭಿನಯದ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು. ರೈತ ಮುಖಂಡ ತಿಪ್ಪಣ್ಣ ಕೂಲಿ, ನಿವೃತ್ತ ಸೈನಿಕ ಸಂಘಟನೆಯ ಜಿಲ್ಲಾ ಮುಖಂಡರಾದ ಶ್ರೀನಿವಾಸ ಯರೇಶಿಮಿ, ಕೆಎಸ್.ಡಿಸಿಎಫ್ ಮುಖಂಡ ಖಲಂದರ್ ಅಲ್ಲಿಗೌಡ್ರ, ಮಲ್ಲೇಶ ಗೌರಕ್ಕನವರ ಸೇರಿದಂತೆ ಎಸ್‌ಎಫ್‌ಐ- ಡಿವೈಎಫ್‌ಐ ಸಾಹಿತಿ ಕಲಾವಿದರ ಬಳಗ,ಬಿಜಿವಿಎಸ್ ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.