ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳ ಪಾತ್ರದ ಕುರಿತು ಉಪನ್ಯಾಸ

ಲೋಕದರ್ಶನ ವರದಿ

ಹಳಿಯಾಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳ ಪಾತ್ರದ ಕುರಿತು ಕಾರ್ಯಕ್ರಮವು ಗುರುವಾರ ಹಳಿಯಾಳ ಪಟ್ಟಣದ ಬಾಬುಜಗಜೀವನರಾಮ ಭವನದಲ್ಲಿ ಜರುಗಿತು.

ಅರಣ್ಯ ಇಲಾಖೆಯ ಹಳಿಯಾಳ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ಈ ಮೂರು ತಾಲೂಕುಗಳ ಗ್ರಾಮ ಅರಣ್ಯ ಸಮಿತಿಗಳ (ವಿಎಫ್ಸಿ) ಪದಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಅವರು ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕುರಿತು ಮಾತನಾಡುತ್ತಾ ಪರಿಸರದಲ್ಲಿ ಮಾನವನಿಗಿಂತ ಬಹು ಹಿಂದಿನಿಂದ ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳು ವಾಸಿಸುತ್ತಿವೆ. ಹೀಗಾಗಿ ಪರಿಸರದ ಮೇಲೆ ಮನುಷ್ಯ ಮಾತ್ರ ತನ್ನ ಹಕ್ಕು ಇದೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ ಎಂದರು.

ಗ್ರಾಮ ಅರಣ್ಯ ಸಮಿತಿಗಳಿಗೆ ಆಯಾ ಪ್ರದೇಶದಲ್ಲಿನ ಆಯ್ದ ಅರಣ್ಯವನ್ನು ಕಾಪಾಡಲು ನೀಡಲಾಗಿದೆ. ಆ ಕಾರ್ಯವನ್ನು ಅವರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾಡುತ್ತಿದ್ದಾರೆ. ವೃಕ್ಷಗಳ ಸಂಖ್ಯೆ ಹೆಚ್ಚು ಮಾಡಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಮನೆಯಲ್ಲಿ ತಿಂದ ಹಣ್ಣಿನ ಬೀಜಗಳನ್ನು ಖಾಸಗಿ ಜಾಗೆಯಲ್ಲಿ ಸ್ಥಳಾವಕಾಶ ಇರದಿದ್ದರೆ ಅರಣ್ಯದಲ್ಲಿನ ಖುಲ್ಲಾ ಜಾಗೆಯಲ್ಲಿ ಆ ಬೀಜಗಳನ್ನು ನೆಲದಲ್ಲಿ ಬಿತ್ತಬೇಕು ಎಂದು ಸಲಹೆ ನೀಡಿದರು.

ಅರಣ್ಯದಲ್ಲಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಹಳಿಯಾಳ ವಿಭಾಗದ ಅರಣ್ಯ ಸಿಬ್ಬಂದಿಗಳು ಮಾಡಿದ ಕಾರ್ಯ ವೃತ್ತ ಮಟ್ಟದಲ್ಲಿ ಕೂಡ ಶ್ಲಾಘನೆಗೆ ಪಾತ್ರವಾಗಿದೆ ಎಂದರು ಡಿ. ಯತೀಶಕುಮಾರ.

ಜಿಲ್ಲಾ ಪಂಚಾಯತ ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೋವರ್ೆಕರ, ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಜೋಯಿಡಾದ ತುಕಾರಾಮ ಮಾಂಜ್ರೇಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ವೇದಿಕೆಯಲ್ಲಿದ್ದರು. ಮಹೇಶ ಹಿರೇಮಠ ನಿರೂಪಿಸಿದರು. ವಾಗೇಶ ಜನ್ನು ವಂದಿಸಿದರು.