ಕೂಡ್ಲಿಗಿ: ಶಾಂತಿಯುತ ಗಣೇಶ ಹಬ್ಬಕ್ಕೆ ಸೂಚನೆ

ಲೋಕದರ್ಶನ ವರದಿ

ಕೂಡ್ಲಿಗಿ 27: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರು ಶಾಂತಿಯುತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಕೂಡ್ಲಿಗಿ ಡಿವೈಎಸ್ಪಿ ಎಂ.ಸಿ. ಶಿವಕುಮಾರ್ ಹೇಳಿದರು. ಗಣೇಶ ಹಬ್ಬದ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ  ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಬ್ಬದ ಸಂದರ್ಭದಲ್ಲಿ ಇಲಾಖೆಯಿಂದ ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಗಣೇಶ್ ಪ್ರತಿಷ್ಟಾಪನೆ ಮಾಡುವ ಸಂಘಟಕರು ಪಟ್ಟಣ ಪಂಚಾಯ್ತಿ ಅನುಮತಿ ಪಡೆಯಬೇಕು ಹಾಗೂ ಜೆಸ್ಕಾಂ ಇಲಾಖೆಯಿಂದ ಪರವಾನಿಗೆ ಪಡೆದು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಬೇಕು. ತಡ ರಾತ್ರಿವರೆಗೂ ಧ್ವನಿವರ್ಧಕಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದರು.

ಸಿಪಿಐ ಟಿ.ಆರ್. ನಯಿಂ ಆಹಮದ್ ಮಾತನಾಡಿ, ಗಣೇಶನ ಪ್ರತಿಷ್ಟಾಪನೆ ಹಾಗೂ ವಿಸರ್ಜನೆ ವೇಳೆ ಯಾವ ಮಾರ್ಗವಾಗಿ ಮೆರವಣಿಗೆ ಹೋಗಲಾಗುತ್ತದೆ ಎಂಬುದನ್ನು ಮುಂಚಿತವಾಗಿ ತಿಳಿಸಬೇಕು. ಇದರಿಂದ ಸೂಕ್ತ ಬಂದೋ ಬಸ್ತ್ ನೀಡಲು ಅನುಕೂಲವಾಗುತ್ತದೆ. ಪಟ್ಟಣ ಪಂಚಾಯ್ತಿ ನಿಗದಿಪಡಿಸಿದ ಜಾಗದಲ್ಲಿಯೇ ಸಾರ್ವಜನಿಕರು ತಮ್ಮ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ಹೇಳಿದರು.

ನಾಗರೀಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಯುವ ಬ್ರಿಗೇಡ್ನ ಸಂಚಾಲಕ ಕೆ.ಎಚ್.ಎಂ. ಸಚಿನ್ ಕುಮಾರ್ ಸಭೆಯಲ್ಲಿ ಮಾತನಾಡಿದರು.

ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರು, ಗುಡೇಕೋಟೆ ಪಿಎಸ್ಐ ಶಂಕ್ರಪ್ಪ ಎಲ್. ನಾಯ್ಕ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಸಣ್ಣ ಕೊತ್ಲಪ್ಪ, ಸಣ್ಣಯ್ಯ, ಹಡಗಲಿ ವೀರಭದ್ರಪ್ಪ, ಕುಮಾರಸ್ವಾಮಿ, ಸಿ.ಬಿ. ಸಿದ್ದೇಶ, ಕ್ಯಾರಿ ರಮೇಶ್, ಗುರಿಕಾರ ರಾಘವೇಂದ್ರ, ಮಾಳಿಗೆ ರಾಘವೇಂದ್ರ, ಅಂಬಲಿ ನಾಗರಾಜ, ಪೀಕಣ್ಣ ಮುಂತಾದವರು ಇದ್ದರು.