ಕಬ್ಬು ಕಟಾವು ಮಾಡದೇ ಸಹಕರಿಸುವಂತೆ ಜೋಶಿ ಕರೆ

ಲೋಕದರ್ಶನ ವರದಿ

ಶೇಡಬಾಳ : ಸಕ್ಕರೆ ಕಾಖರ್ಾನೆಗಳು ಕಳೆದ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ನೀಡುವವರೆಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ಕಬ್ಬಿನ ದರ ಘೋಷಿಸಿದ ನಂತರ ಕಾಖರ್ಾನೆಗಳನ್ನು ಪ್ರಾರಂಭಿಸುವಂತೆ ಸ್ವಾಭಿಮಾನಿ ರೈತ ಸಂಘಟನೆ ಹೋರಾಟಕ್ಕೆ ಕರೆ ನೀಡಿದ್ದು, ಯಾವುದೇ ಕಬ್ಬು ಬೆಳೆಗಾರರು ಕಬ್ಬು ಕಟಾವು ಮಾಡದೇ ಸಹಕರಿಸುವಂತೆ ಕಾಗವಾಡ ಸ್ವಾಭಿಮಾನಿ ರೈತ ಸಂಘಟನೆಯ ಯುವ ಮುಖಂಡ ಶಶಿಕಾಂತ ಜೋಶಿ ಕರೆ ನೀಡಿದರು.

ದಿ. 9 ರಂದು ಶೇಡಬಾಳ ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿದ ಕಬ್ಬು ಬೆಳೆಗಾರರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಹಳೆಯ ಬಾಕಿ ನೀಡುವವರೆಗೆ ಹಾಗೂ ಪ್ರಸಕ್ತ ದರ ಘೋಷಿಸುವವರೆಗೆ ಕಬ್ಬು ಕಟಾವು ಮಾಡುವುದಿಲ್ಲವೆಂದು ಪಣ ತೊಟ್ಟಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಹತ್ತಿಕ್ಕಲು ಕೆಲವೊಂದು ರೈತರು ತಮ್ಮ ಕಬ್ಬುಗಳನ್ನು ಕಟಾವು ಮಾಡುತ್ತಿರುವುದು ಖೇಧಕರ ಸಂಗತಿಯಾಗಿದೆ. ಆಯಾ ಗ್ರಾಮಗಳ ಹೋರಾಟಗಾರರು ಕಬ್ಬು ಕಟಾವು ಮಾಡುತ್ತಿರುವ ರೈತರ ಮನವೊಲಿಸುವಂತೆ ಹೇಳಿದರು. ಒಂದು ವೇಳೆ ಇದಕ್ಕೆ ಸಹಕರಿಸದೇ ಹೋದಲ್ಲಿ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆಗಾರರಾಗುತ್ತಾರೆಂದು ಎಚ್ಚರಿಕೆ ನೀಡಿದರು. 

ಶೇಡಬಾಳ ಪಟ್ಟಣದ ರೈತ ಮುಖಂಡರು ಮಾತನಾಡಿ ಸ್ವಾಭಿಮಾನಿ ರೈತ ಸಂಘಟನೆಯ ಕರೆ ನೀಡುವವರೆಗೆ ಯಾರು ಕಬ್ಬು ಕಟಾವು ಮಾಡದಂತೆ ಧ್ವನಿವರ್ಧಕದ ಮೂಲಕ ಕಬ್ಬು ಬೆಳೆಗಾರರಿಗೆ ಮನವಿ ಮಾಡಿಕೊಂಡು ಹೋರಾಟಕ್ಕೆ ಸಹಕರಿಸುವಂತೆ ಕರೆ ನೀಡುವುದಾಗಿ ಹೇಳಿದರು. 

ಈ ಸಮಯದಲ್ಲಿ ಕಾಗವಾಡ ರೈತ ಮುಖಂಡರಾದ ಶಶಿಕಾಂತ ಜೋಶಿ, ಕಾಕಾಸಾಬ ಚೌಗಲೆ, ಸಚಿನ ಕವಟಗೆ, ಆದಿನಾಥ ಬಿಂದಗೆ, ರಾಜು ಕರವ, ಸುರೇಶ ಪಾಟೀಲ, ಬಂಡು ಮಗದುಮ ಸೇರಿದಂತೆ ಕಾಗವಾಡ, ಶೇಡಬಾಳ ಗ್ರಾಮದ ನೂರಾರು ರೈತರು ಇದ್ದರು.