ವೈದ್ಯರಿಲ್ಲದ ಸರಕಾರಿ ಆರೋಗ್ಯ ಕೇಂದ್ರ

ಲೋಕದರ್ಶನ ವರದಿ

ಸಿದ್ದಾಪುರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ, ಸುಮಾರು 5ಕ್ಕೂ ಹೆಚ್ಚು ಗ್ರಾಪಂಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಕ್ಯಾದಗಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕವಾದ ವೈದ್ಯರಿಲ್ಲದ ಕಾರಣ ಈ ಭಾಗದ ಜನತೆ ಬವಣೆಪಡುವಂತಾಗಿದೆ. ಮಂಗನ ಕಾಯಿಲೆ ಪೀಡಿತವಾದ ಈ ಪ್ರದೇಶದಲ್ಲಿ ಮಂಗನ ಕಾಯಿಲೆ ಮತ್ತು ಇನ್ನಿತರ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ದೊರೆಯುವದು ಇದರಿಂದ ಕಷ್ಟಕರವಾಗಿದೆ. ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡಲೇ ಉತ್ತಮ ವೈದ್ಯರನ್ನು ನೇಮಿಸಿ ತಾಲೂಕು ಕೇಂದ್ರದಿಂದ 20-30 ಕಿಮೀ. ದೂರದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕ್ಯಾದಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಐ.ನಾಯ್ಕ ಕ್ಯಾದಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. 

ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಕ್ಯಾದಗಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಬಾಳಗೋಡ, ವಾಜಗೋಡ ಗ್ರಾಮಗಳಲ್ಲಿ ಈ ವರ್ಷ ಮಂಗನಕಾಯಿಲೆ ಗಂಡಾಂತರದ ರೀತಿಯಲ್ಲಿ ಬಾಧಿಸಿದೆ. 500ಕ್ಕೂ ಹೆಚ್ಚು ಜನರಲ್ಲಿ  ಶಂಕಿತ ಮಂಗನಕಾಯಿಲೆ ಕಂಡುಬಂದಿದೆ. 12ಕ್ಕೂ ಹೆಚ್ಚು ಮಂದಿ ಇದರಿಂದ ಸಾವನ್ನಪ್ಪಿದ್ದು ಅವರಲ್ಲಿ ಪರಿಶಿಷ್ಠ ಜಾತಿಯ ರೋಗಿಗಳೇ ಹೆಚ್ಚಿದ್ದಾರೆ. ಇನ್ನೂ ಹಲವರು ಈ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೊಂದು ಗಂಭೀರವಾದ ಕಾಯಿಲೆ ಈ ಭಾಗದಲ್ಲಿದ್ದರೂ ಪ್ರಾಥಮಿಕ ಚಿಕಿತ್ಸೆ ನೀಡುವ ಕ್ಯಾದಗಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿನ ಇನ್ನಿತರ ವ್ಯಾಧಿಗಳಿಗೂ ಚಿಕಿತ್ಸೆ ಪಡೆಯಬೇಕೆಂದರೆ ಕೋಡಿಗದ್ದೆ, ಸೂರಗಾಲ, ದೊಡ್ಮನೆ ಮುಂತಾದ ಭಾಗಗಳಿಂದ 30-35 ಕಿಮೀ.ದೂರದ ಸಿದ್ದಾಪುರಕ್ಕೆ ಬರುವ ಅನಿವಾರ್ಯತೆ ಉಂಟಾಗಿದೆ. ಹೆರಿಗೆ ಮುಂತಾದವಕ್ಕೆ ಸಮಸ್ಯೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೆ ಉತ್ತಮ ಸೇವೆ ಒದಗಿಸಿ ಹೆಸರಾಗಿದ್ದ ಕ್ಯಾದಗಿ ಆರೋಗ್ಯ ಕೇಂದ್ರಕ್ಕೆ ಇತ್ತೀಚೆಗೆ ವೈದ್ಯರುಗಳ ನೇಮಕವಾಗುತ್ತಿಲ್ಲ. ಈ ಹಿಂದೆ ಜನರು ಪ್ರತಿಭಟನೆ ಮಾಡಿದ ಕಾರಣ ವೈದ್ಯರನ್ನು ನೇಮಿಸಲಾಗಿತ್ತು. ಅವರು ಉನ್ನತ ಅಧ್ಯಯನಕ್ಕೆ ತೆರಳಿದ ಕಾರಣ ಈಗ ಆಸ್ಪತ್ರೆಗೆ ವೈದ್ಯರಿಲ್ಲದಂತಾಗಿದೆ. ಅವರ ಸ್ಥಾನಕ್ಕೆ ಬೇರೆ ವೈದ್ಯರನ್ನೂ ನೇಮಕ ಮಾಡಿಲ್ಲ. ದಿನನಿತ್ಯ 150ರಿಂದ 200 ರೋಗಿಗಳು ಪ್ರಾಥಮಿಕ ಚಿಕಿತ್ಸೆ, ಔಷಧೋಪಚಾರ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಯಾವ ಸೌಲಭ್ಯಗಳೂ ದೊರೆಯದಂತಾಗಿದೆ. ಇತ್ತೀಚೆಗೆ ಈ ಆಸ್ಪತ್ರೆಗೆ ಸುಮಾರು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿಮರ್ಾಣವಾಗಿದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾ ವೈದ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ಜನತೆ ಅನುಭವಿಸುತ್ತಿರುವ ಈ ಗೋಳಿಗೆ ಜಿಲ್ಲಾ ವೈದ್ಯಾಧಿಕಾರಿಗಳು ಕಾರಣವೆನ್ನಬಹುದು. 

ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮ ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಈ ಭಾಗದ ಜನತೆಯ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಎನ್.ಐ.ನಾಯ್ಕ  ಕ್ಯಾದಗಿ ತಮ್ಮ ಮನವಿಯಲ್ಲಿ ಕೋರಿದ್ದಾರೆ.