ಮಗುವಿಗೆ ದಡಾರ ರೂಬೆಲ್ಲಾ ಲಸಿಕೆ ತಪ್ಪದೇ ಹಾಕಿಸಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ

Give Measles Rubella Vaccination to the child without fail: District RCH Officer Dr. Hanumanthappa

ಮಗುವಿಗೆ ದಡಾರ ರೂಬೆಲ್ಲಾ ಲಸಿಕೆ ತಪ್ಪದೇ ಹಾಕಿಸಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ 

ಬಳ್ಳಾರಿ 29: ಮಗುವಿಗೆ ಒಂಬತ್ತು ತಿಂಗಳು ತುಂಬಿದ ನಂತರ ದಡಾರ ರೂಬೆಲ್ಲಾ ಲಸಿಕೆ ತಪ್ಪದೇ ಹಾಕಿಸಬೇಕು. ದಡಾರ(ಅಮ್ಮ) ದಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬೇಕು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಗುಗ್ಗರಹಟ್ಟಿ ವ್ಯಾಪ್ತಿಯ ಕಾಕರ್ಲತೋಟದ ಹನುಮಾನ ನಗರ, ವೆಂಕಟಮ್ಮ ಕಾಲೋನಿ, ಗುರ​‍್ಪ ತೋಟ ಬಡಾವಣೆಗಳಲ್ಲಿ ದಡಾರ ರೂಬೆಲ್ಲಾ ಲಸಿಕೆ ಹಾಕಿಸಲು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಆಡು ಭಾಷೆಯಲ್ಲಿ ಅಮ್ಮ, ತಟ್ಟು ಎಂದು ಕರೆಯುವ ದಡಾರವನ್ನು ನಿರ್ಮೂಲನೆ ಮಾಡಲು ಮತ್ತು ಮಕ್ಕಳಿಗೆ ದಡಾರ ಕಂಡುಬಂದರೂ ಮಕ್ಕಳಿಗೆ ಗಂಭೀರ ಆರೋಗ್ಯ ಸಮಸ್ಯೆ ತರಬಹುದಾದುದನ್ನು ತಪ್ಪಿಸಲು ತಪ್ಪದೇ ದಡಾರ ಲಸಿಕೆ ಹಾಕಿಸಬೇಕು ಎಂದು ಜನತೆಗೆ ಮನವಿ ಮಾಡಿದರು. 

ತಪ್ಪು ನಂಬಿಕೆಗಳಿಂದ ಲಸಿಕೆ ಪಡೆಯದ ಕುಟುಂಬಗಳ ಪಾಲಕರಿಗೆ ಜಾಗೃತಿ ನೀಡಿಲಾಗುತ್ತಿದೆ. ವಲಸೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಯಸ್ಸಿಗನುಸಾರವಾಗಿ ನೀಡುವ ಲಸಿಕೆಗಳನ್ನು ಹಾಕಲಾಗುತ್ತಿದ್ದು, ಪ್ರತಿ ಗುರುವಾರ ನಿಮ್ಮ ಹತ್ತಿರದ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಆರ್‌.ಎಸ್‌.ಶ್ರೀಧರ ಅವರು ಮಾತನಾಡಿ ನೆರೆಯ ದೇಶಗಳಾದ ಪಾಕಿಸ್ಥಾನ, ಅಫಘಾನಿಸ್ಥಾನಗಳಲ್ಲಿ ಇಂದಿಗೂ ಪೋಲಿಯೊ ಪ್ರಕರಣಗಳು ಕಂಡು ಬರುತ್ತಿದ್ದು, ಇಂದು ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದುಡಿಮೆ, ಪ್ರವಾಸ, ವ್ಯಾಪಾರ ಮುಂತಾದ ಉದ್ದೇಶಗಳಿಗೆ ಹೆಚ್ಚು ಪ್ರಯಾಣ ಮಾಡುತ್ತಿದ್ದು, ಈ ದಿಶೆಯಲ್ಲಿ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಈ ಸಂಧರ್ಭದಲ್ಲಿ ಡಾ.ಕಾಶೀಪ್ರಸಾದ್, ಡಾ.ಶಗುಪ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಐಎಫ್‌ವಿ ಕೋಟೇಶ್ವರ ರಾವ್, ಬಿಹೆಚ್‌ಇಓ ಶಾಂತಮ್ಮ, ತಾಲ್ಲೂಕು ಆಶಾ ಮೇಲ್ವಿಚಾರಕಿ ನೇತ್ರಾ,  ಸಿಬ್ಬಂದಿಯವರಾದ ಅಮೀನಾ ಬೀ, ನಿರಂಜನ್ ಪತ್ತಾರ್, ಈರಯ್ಯ, ಉಮಾ ಮಹೇಶ್ವರಿ.ಎನ್‌., ಮಂಜುಳಾ, ಉಮಾ ಮಹೇಶ್ವರಿ.ಈ., ಜ್ಯೋತಿ, ಅರುಣಾ, ಗಂಗಾಧರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ತಾಯಂದಿರು ಉಪಸ್ಥಿತರಿದ್ದರು. 

ದಡಾರದ ಲಕ್ಷಣಗಳು: ದೇಹದ ಮೇಲೆ ನುಚ್ಚು ಗುಳ್ಳೆಗಳು, ಜ್ವರ, ಕೆಮ್ಮು, ಮೂಗಿನಿಂದ ಸುರಿಯುವುದು ಅಥವಾ ಕಣ್ಣು ಕೆಂಪಾಗುವುದು, ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ಬೇಗ ರೋಗ ಉಲ್ಭಣವಾಗುವುದು. ವಾಂತಿ ಬೇಧಿ, ನ್ಯೂಮೋನಿಯಾ ಅಗಿ ಮಗು ಮರಣ ಹೊಂದಬಹುದಾದ ಸಂಭವವಿರುತ್ತದೆ.