ಭಗೀರಥರ ಜೀವನಾದರ್ಶ ಮನುಕುಲಕ್ಕೆ ಪ್ರೇರಣಾದಾಯಕ : ಗುರುನಾಥ ದಡ್ಡೆ
ವಿಜಯಪುರ 04: ಭಗೀರಥರು ತಮ್ಮ ಕಠಿಣ ತಪ್ಪಸ್ಸಿನ ಮೂಲಕ ಗಂಗೆಯನ್ನು ಧರೆಗೆ ಇಳಿಸಿದ ಅವರ ಕುಗ್ಗದ ಛಲ ಹಾಗು ದೃಢ ಸಂಕಲ್ಪದ ಮೂಲಕ ಕಠಿಣ ಕಾರ್ಯ, ಸಹನೆ, ದೃಢನಿಶ್ಚಯದಂತಹ ಅವರ ಜೀವನಾದರ್ಶದ ವಿಚಾರಗಳು ಮಾನವ ಜನಾಂಗಕ್ಕೆ ಪ್ರೇರಣಾದಾಯಕವಾಗಿದೆ ಎಂದು ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುರಿ ಸಾಧನೆಯಲ್ಲಿ ಬರುವ ಅಡೆತಡೆಗಳಿಗೆ ಹಿಂಜರಿಯದೇ, ದೃಢ ನಿಶ್ಚಯದ ಮೂಲಕ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಗುರಿ ಸಾಧಿಸಬಹುದು ಎಂಬ ಭಗೀರಥರ ಜೀವನ ತತ್ವಾದರ್ಶ, ಅವರ ಜೀವನ ಚರಿತ್ರೆ ಇಂದಿನ ಯುವಕರು ತಿಳಿದುಕೊಳ್ಳಬೇಕು. ಸತ್ಪುರುಷರು,ದಾರ್ಶನಿಕರು ನಡೆದು ಬಂದ ದಾರಿ, ಅವರು ಈ ಜನಾಂಗಕ್ಕೆ ನೀಡಿದ ಸಂದೇಶ, ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳೋಣ ಎಂದು ಹೇಳಿದರು.
ಉಪನ್ಯಾಸ ನೀಡಿದ ಸರಸ್ವತಿ ಚಿಮ್ಮಲಗಿ ಅವರು ಮಾತನಾಡಿ, ಭಗೀರಥರು ಕಠಿಣ ತಪಸ್ಸಿನ ಮೂಲಕ ಗಂಗಾ ಮಾತೆಯನ್ನು ಧರೆಗಿಳಿಸಿದವರು. ದೃಢ ಸಂಕಲ್ಪದಿಂದ ಎಂತಹ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಹುದೆಂಬ ಸಂದೇಶವನ್ನು ಭಗೀರಥರು ಜಗತ್ತಿಗೆ ನೀಡಿದ್ದಾರೆ. ಭಗೀರಥ ಅವರ ಜೀವನ ಗಾಥೆ ಅತ್ಯಂತ ಸ್ಫ್ಪೂರ್ತಿದಾಯಕವಾಗಿದೆ ಎಂದು ಹೇಳಿದ ಅವರು, ಭಗೀರಥ ಅವರ ಕುರಿತು ಸವಿಸ್ತಾರವಾಗಿ ಉಪನ್ಯಾಸದ ಮೂಲಕ ತಿಳಿಸಿಕೊಟ್ಟರು.
ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ, ವಿವಿಧ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮೆರವಣಿಗೆಗೆ ಚಾಲನೆ:
ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಗೀರಥ ಅವರ ಭಾವಚಿತ್ರದ ಮೆರವಣಿಗೆಗೆ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಅವರು ಚಾಲನೆ ನೀಡಿದರು. ಮೆರವಣಿಗೆಯೂ ಆಕರ್ಷಕ ವಿವಿಧ ಜಾನಪದ ಕಲಾತಂಡದೊಂದಿಗೆ, ನಗರದ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಸಾಗಿ, ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಸಮಾವೇಶಗೊಂಡಿತು.