ಬಳ್ಳಾರಿ: ನೆಹರು ಯುವ ಕೇಂದ್ರದಿಂದ ‘ರಾಷ್ಟ್ರೀಯ ಯುವ ದಿನ’ ಆಚರಣೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಜೀವಂತ: ರಾಮ್ ಕಿರಣ್
ಬಳ್ಳಾರಿ 13:ಆಧ್ಯಾತ್ಮಿಕ ಲೋಕದ ಮಹಾನ್ ಚೇತನ, ಭವ್ಯ ಭಾರತದ ಹೆಮ್ಮೆಯ ಪುತ್ರ, ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆಯಾಗಿದ್ದು, ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಎಂದೆಂದಿಗೂ ಜೀವಂತ ಎಂದು ಶ್ರೀಮೇಧಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಮ್ ಕಿರಣ್ ಅವರು ಹೇಳಿದರು.
ನೆಹರು ಯುವ ಕೇಂದ್ರ ಬಳ್ಳಾರಿ, ಶ್ರೀಮೇಧಾ ಪದವಿ ಪೂರ್ವ ಕಾಲೇಜ್ ಹಾಗೂ ಚಿಗುರು ಕಲಾ ತಂಡ, ಇಬ್ರಾಹಿಂಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ನಗರದ ಕೋಟೆ ಪ್ರದೇಶದ ಶ್ರೀಮೇಧಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಜೀವನ ಚರಿತ್ರೆ ಮತ್ತು ಅವರ ಸಾಧನೆ ಬಗ್ಗೆ ಯುವ ಸಮುದಾಯ ಅರಿತುಕೊಳ್ಳಬೇಕು. “ಏಳಿ ಎದ್ದೇಳಿ” ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ದಿವ್ಯವಾಣಿಯ ಜ್ಞಾನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ ನಾಟಕ ವಿಭಾಗದ ಅತಿಥಿ ಉಪನ್ಯಾಸಕರಾದ ನೇತಿ ರಘುರಾಮ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಒಬ್ಬ ವೀರ ಸನ್ಯಾಸಿ, ತತ್ವಜ್ಞಾನಿ, ಭಾರತ ದೇಶದಲ್ಲಿ ಭಾರತ ಸಂಸ್ಕೃತಿಯನ್ನು ದೇಶ ವಿದೇಶದಲ್ಲಿ ಪ್ರಚಾರ ಮಾಡಿದ ಏಕೈಕ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ವಿವೇಕಾನಂದ ಅವರ ಜೀವನ ಚರಿತ್ರೆ, ಸಾಧನೆ ಹಾಗು ಅವರು ನಡೆದು ಬಂದಂತಹ ದಾರಿ ಯುವ ಜನಾಂಗವು ಅರ್ಥೈಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಉಪಪ್ರಾಚಾರ್ಯರಾದ ವಿಜಯ ಭಾಸ್ಕರ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು.
ಇಬ್ರಾಹಿಂಪುರ ಚಿಗುರು ಕಲಾ ತಂಡದ ಹುಲುಗಪ್ಪ ಅವರು ಗಾಯನ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಅಕ್ಷಯ ಕಲಾ ಟ್ರಸ್ಟ್‌ನ ಹೆಚ್.ಜಿ.ಸುಂಕಪ್ಪ, ನೆಹರು ಯುವ ಕೇಂದ್ರದ ಅಂಬರೀಶ್ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.